ADVERTISEMENT

ವೈವಾಹಿಕ ಜಾಲತಾಣಗಳ ಮೂಲಕ ವಂಚನೆ: ‘ಆನ್‌ಲೈನ್‌ ವರ’ ಬಂಧನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 19:31 IST
Last Updated 9 ಜನವರಿ 2022, 19:31 IST
ಜೈ ಭೀಮ್‌ ವಿಠಲ್‌ ಪಡುಕೋಟೆ
ಜೈ ಭೀಮ್‌ ವಿಠಲ್‌ ಪಡುಕೋಟೆ   

ಬೆಂಗಳೂರು: ವೈವಾಹಿಕ ಜಾಲತಾಣಗಳ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ, ಹೆಸ್ಕಾಂನಲ್ಲಿ ಉದ್ಯೋಗ ಕೊಡಿಸುವುದಾಗಿ ಆನ್‌ಲೈನ್‌ ಮೂಲಕ ₹21.30 ಲಕ್ಷಕ್ಕೂ ಹೆಚ್ಚು ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದ ‘ಆನ್‌ಲೈನ್‌ ವರ’ನನ್ನು ಆಗ್ನೇಯ ವಿಭಾಗದ ಸಿ.ಇ.ಎನ್‌. ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವಿಜಯಪುರ ಜಿಲ್ಲೆ ಹಿಟ್ಟನಹಳ್ಳಿ ಗ್ರಾಮದ ಜೈ ಭೀಮ್‌ ವಿಠಲ್‌ ಪಡುಕೋಟೆ (33) ಬಂಧಿತ. ಈತನಿಂದ ನಿಸಾನ್ ಕಂಪನಿಯ ಕಾರು, ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ ಹಾಗೂ ಬ್ಯಾಂಕ್‌ ಖಾತೆಯಲ್ಲಿದ್ದ ₹1.66 ಲಕ್ಷಕ್ಕೂ ಹೆಚ್ಚಿನ ಹಣ ಜಪ್ತಿ ಮಾಡಲಾಗಿದೆ. ಆರೋಪಿಯನ್ನು ವಿಜಯಪುರದಿಂದ ಕರೆತಂದು ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಆರೋಪಿಯ ತಂದೆ ಹೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮೃತಪಟ್ಟ ನಂತರ ಅನುಕಂಪದ ಮೇಲೆ ಆರೋಪಿಗೆ ಲೈನ್‌ಮೆನ್‌ ಕೆಲಸ ಸಿಕ್ಕಿತ್ತು. ಇಲಾಖೆಯಲ್ಲಿ 8 ತಿಂಗಳು ಕೆಲಸ ಮಾಡಿದ್ದ ಆತ 2013ರಲ್ಲಿ ಮುದ್ದೆಬಿಹಾಳ ಮೂಲದ 23 ವರ್ಷದ ಸವಿತಾ ಎಂಬ ಯುವತಿಯನ್ನು ಕೊಲೆ ಮಾಡಿದ್ದ. 2 ವರ್ಷ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಹೀಗಾಗಿ ಇಲಾಖೆಯವರು ಕೆಲಸದಿಂದ ವಜಾ ಮಾಡಿದ್ದರು’ ಎಂದು ತಿಳಿಸಿದ್ದಾರೆ.‌

ADVERTISEMENT

‘ಜೈಲಿನಿಂದ ಹೊರ ಬಂದ ನಂತರ ಜೀವನೋಪಾಯಕ್ಕೆ ಯಾವುದೇ ಕೆಲಸ ಇರಲಿಲ್ಲ. ಹೀಗಾಗಿ ಜೀವನ್‌ ಸಾಥಿ ಡಾಟ್‌ ಕಾಂ, ಭಾರತ್‌ ಮ್ಯಾಟ್ರಿಮೋನಿ ಡಾಟ್‌ ಕಾಂ, ಶಾದಿ ಡಾಟ್‌ ಕಾಂ, ಕಮ್ಯೂನಿಟಿ ಮ್ಯಾಟ್ರಿಮೋನಿ ಡಾಟ್‌ ಕಾಂ, ಕನ್ನಡ ಮ್ಯಾಟ್ರಿಮೋನಿ ಡಾಟ್‌ ಕಾಂ ಜಾಲತಾಣಗಳಲ್ಲಿ ನಕಲಿ ಪ್ರೊಪೈಲ್‌ ಸೃಷ್ಟಿಸಿದ್ದ. ತಾನು ಹುಬ್ಬಳ್ಳಿಯ ಹೆಸ್ಕಾಂನಲ್ಲಿ ಸೆಕ್ಷನ್‌ ಅಧಿಕಾರಿಯಾಗಿರುವುದಾಗಿ ಉಲ್ಲೇಖಿಸಿದ್ದ. ಈ ಜಾಲತಾಣಗಳಲ್ಲಿ ಖಾತೆ ತೆರೆದಿದ್ದ ಶಿವಮೊಗ್ಗ, ಹಾವೇರಿ, ಮೈಸೂರು, ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಯಾದಗಿರಿ, ರಾಯಚೂರು ಮೂಲದ ಒಟ್ಟು 26 ಯುವತಿಯರನ್ನು ಸಂಪರ್ಕಿಸಿದ್ದ ಈತ ಮದುವೆಯಾಗುವುದಾಗಿ ಎಲ್ಲರನ್ನೂ ನಂಬಿಸಿದ್ದ. ಯುವತಿಯರ ಕುಟುಂಬದ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದ ಆರೋಪಿ, ಹೆಸ್ಕಾಂನಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡುತ್ತಿದ್ದ. ಆನ್‌ಲೈನ್‌ ಮೂಲಕ ತನ್ನ ಖಾತೆಗೆ ಹಣವನ್ನೂ ವರ್ಗಾವಣೆ ಮಾಡಿಕೊಂಡಿದ್ದ’ ಎಂದು ವಿವರಿಸಿದ್ದಾರೆ.

‘ಯುವತಿಯರಿಂದ ಪಡೆದ ಹಣದಿಂದ ಆರೋಪಿಯು ಪ್ರಮುಖ ನಗರಗಳಿಗೆ ಪ್ರವಾಸ ಕೈಗೊಂಡು ಮೋಜು ಮಸ್ತಿ ಮಾಡುತ್ತಿದ್ದ’ ಎಂದೂ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.