ADVERTISEMENT

ಗುರು ರಾಘವೇಂದ್ರ ಬ್ಯಾಂಕ್‌: ಸಾಲ ವಸೂಲಾತಿಯಲ್ಲೂ ವಂಚನೆ- ಎಚ್‌.ಡಿ.ಬಸವರಾಜು ಆರೋಪ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 19:31 IST
Last Updated 25 ಜನವರಿ 2022, 19:31 IST

ಬೆಂಗಳೂರು: ‘ಗುರು ರಾಘವೇಂದ್ರ ಕೋ–ಆಪರೇಟಿವ್‌ ಬ್ಯಾಂಕ್‌ನವರು ಗ್ರಾಹಕರಿಂದ ಸಾಲದ ಮೊತ್ತಕ್ಕಿಂತಲೂ ನೂರು ಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖಂಡ ಎಚ್‌.ಡಿ.ಬಸವರಾಜು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ‘ಗ್ರಾಹಕರೊಬ್ಬರು 2006–07ರಲ್ಲಿ ₹9 ಲಕ್ಷ ಸಾಲ ಪಡೆದು ಮರುಪಾವತಿ ಮಾಡಿದ್ದರು. ಹೀಗಿದ್ದರೂ ₹57.30 ಕೋಟಿ ಸಾಲ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಅವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಆ ಮೂಲಕ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಹೀಗೆ ಹಲವು ಗ್ರಾಹಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಬಲವಂತವಾಗಿ ಸಾಲ ವಸೂಲಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಬ್ಯಾಂಕ್‌ನವರ ಈ ಕೃತ್ಯಕ್ಕೆ ಪೊಲೀಸರು ಸಹಕಾರ ನೀಡುತ್ತಿದ್ದಾರೆ’ ಎಂದು ದೂರಿದರು.

ಎಎಪಿ ಬೆಂಗಳೂರು ನಗರ ಕಾನೂನು ಘಟಕದ ಅಧ್ಯಕ್ಷ ಮಂಜುನಾಥ್‌ ಸ್ವಾಮಿ, ‘ಗ್ರಾಹಕರು ಬೃಹತ್ ಮೊತ್ತದ ಸಾಲ‍ಪಡೆದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಬ್ಯಾಂಕ್‌ನ ಆಡಳಿತ ಮಂಡಳಿಗೆ ವಕೀಲರ ಮೂಲಕ ನೋಟಿಸ್‌ ನೀಡಲಾಗಿದೆ. ಒಂದೂವರೆ ತಿಂಗಳಾದರೂ ಬ್ಯಾಂಕ್‌ನಿಂದ ಪ್ರತಿಕ್ರಿಯೆ ಬಂದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂಡಲೇ ಮಧ್ಯಪ್ರವೇಶಿಸಿ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯ ತಡೆಯುವಂತೆ ಪೊಲೀಸರಿಗೆ ಸೂಚನೆ ನೀಡಬೇಕು’ ಎಂದ ಒತ್ತಾಯಿಸಿದರು.

ADVERTISEMENT

ಎಎಪಿ ಮುಖಂಡರಾದ ಉಷಾ ಮೋಹನ್‌, ಮಂಜುನಾಥ್‌ ಪಾಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.