ADVERTISEMENT

ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ₹4.50 ಲಕ್ಷ ವಂಚನೆ

ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 15:36 IST
Last Updated 14 ಏಪ್ರಿಲ್ 2025, 15:36 IST
   

ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ಉದ್ಯಮಿ ಹಾಗೂ ಅವರ ಸ್ನೇಹಿತನಿಗೆ ₹4.50 ಲಕ್ಷ ವಂಚನೆ ಮಾಡಲಾಗಿದ್ದು, ಈ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಲ್ತಾನ್‌ ನಿಯಾಜ್‌ ಹಾಗೂ ಅಜ್ಮಲ್‌ ಅಲಿಯಾಸ್‌ ಫೈಜಲ್‌ ವಿರುದ್ಧ ಉದ್ಯಮಿ ವಿ.ಮಂಜುನಾಥ್‌ ಎಂಬುವರು ನೀಡಿರುವ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಹದಿನೈದು ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ದುಬೈನ ಸುಲ್ತಾನ್‌ ನಿಯಾಜ್‌ ಎಂಬಾತ ದೂರುದಾರರಿಗೆ ಪರಿಚಯವಾಗಿದ್ದ. ನಂಬಿಕಸ್ಥನಂತೆ ಬಿಂಬಿಸಿಕೊಂಡು ಮಾತನಾಡುತ್ತಿದ್ದ. ನಿರಂತರ ಸಂಪರ್ಕದಲ್ಲಿದ್ದ. ಕ್ರಿಪ್ಟೊ(ಯುಎಸ್‌ಡಿಟಿ) ಕರೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ದೂರುದಾರ ಹಾಗೂ ಅವರ ಸ್ನೇಹಿತನ ಮನವೊಲಿಸಿದ್ದ. ಆರೋಪಿಗಳ ಮಾತು ನಂಬಿದ್ದ ಇಬ್ಬರೂ ಹೂಡಿಕೆಗೆ ನಿರ್ಧಾರ ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಕೆಲವು ದಿನಗಳ ಬಳಿಕ ಹೂಡಿಕೆ ಮಾಡುವುದಾಗಿ ಸುಲ್ತಾನ್‌ ನಜಾಯ್‌ಗೆ ಇಬ್ಬರೂ ಮಾಹಿತಿ ನೀಡಿದ್ದರು. ಬೆಂಗಳೂರಿನಲ್ಲಿ ನೆಲಸಿರುವ ತನ್ನ ಸ್ನೇಹಿತ ಅಜ್ಮಲ್‌‌ಗೆ ಹಣ ನೀಡುವಂತೆ ಆತ ತಿಳಿಸಿದ್ದ. ದೂರುದಾರರು ತನ್ನ ಸ್ನೇಹಿತರಾದ ಸುನಿಲ್‌ ಹಾಗೂ ಸತೀಶ್ ಅವರ ಜತೆಗೆ ತೆರಳಿ ಕಾಫಿ ಡೇ ಮಳಿಗೆಯೊಂದರ ವಾಹನ ನಿಲುಗಡೆ ಪ್ರದೇಶದಲ್ಲಿ ₹4.50 ಲಕ್ಷ ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರಲಿದೆ ಎಂಬ ಆಸೆಯಿಂದ ಮಂಜುನಾಥ್‌ ಅವರು ₹2.50 ಲಕ್ಷ ಹಾಗೂ ಸುನಿಲ್‌ ₹ 2 ಲಕ್ಷ ನೀಡಿದ್ದಾರೆ ಎಂಬುದು ಗೊತ್ತಾಗಿದೆ. ಆರೋಪಿಗಳಿಬ್ಬರು ಹಣ ಪಡೆದು ವಾಪಸ್ ನೀಡಿದೇ ಮೋಸ ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.