ADVERTISEMENT

ಉದ್ಯೋಗ ಕೊಡಿಸುವುದಾಗಿ ವಂಚನೆ; ಆರೋಪಿಗಳ ಬ್ಯಾಂಕ್ ಖಾತೆಗಳಲ್ಲಿ ₹40 ಕೋಟಿ ವ್ಯವಹಾರ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 0:30 IST
Last Updated 29 ನವೆಂಬರ್ 2023, 0:30 IST
ವಂಚನೆ
ವಂಚನೆ   

ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾರ್ವಜನಿಕರಿಗೆ ಅರೆಕಾಲಿಕ ಉದ್ಯೋಗ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರ್.ಟಿ.ನಗರ ನಿವಾಸಿ ಸೈಯದ್ ಯೂನಸ್ ಪಾಜಿಲ್(31), ಭಾರತಿನಗರ ನಿವಾಸಿ ಮೊಹಮ್ಮದ್ ಕಲೀಮುಲ್ಲಾ(35), ಕಾವೇರಿನಗರ ನಿವಾಸಿ ಸೈಯದ್ ಅರ್ಬಾಜ್(24) ಮತ್ತು ಫ್ರೆಜರ್ ಟೌನ್ ನಿವಾಸಿ ಇಬ್ರಾಹಿಂ ಕರ್ನೂಲ್(36) ಬಂಧಿತರು.

ADVERTISEMENT

ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳಿಂದ 30 ವಿವಿಧ ಖಾತೆಗಳಲ್ಲಿದ್ದ ₹60 ಲಕ್ಷ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯಕ್ತ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಆರೋಪಿಗಳು ಸೃಷ್ಟಿಸಿದ್ದ ಖಾತೆಗಳ ವಿರುದ್ಧ ದೇಶದಾದ್ಯಂತ 305 ಪ್ರಕರಣಗಳು ದಾಖಲಾಗಿವೆ. ಸುಮಾರು ₹40 ಕೋಟಿ ವಂಚನೆ ಮಾಡಿದ್ದಾರೆ ಎಂದು ತನಿಖೆಯಿಂದ ಗೊತ್ತಾಗಿದೆ.

ಕೃತ್ಯಕ್ಕೆ ಬಳಸಿದ್ದ 4 ಮೊಬೈಲ್‌ಗಳು, 2 ಬ್ಯಾಂಕ್ ಪಾಸ್‌ಬುಕ್, 6 ಡೆಬಿಟ್ ಕಾರ್ಡ್, ಸಿಮ್ ಕಾರ್ಡ್‌ಗಳು, ಬಯೊಮೆಟ್ರಿಕ್ ಸಾಧನ, 2 ಸೀಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹೇಗೆ ವಂಚನೆ?:
ಆರೋಪಿಗಳಿಗೆ ದುಬೈನ ವ್ಯಕ್ತಿಯೊಬ್ಬ ಪರಿಚಯವಿತ್ತು. ಆತನ ಸೂಚನೆ ಮೇರೆಗೆ ಬಂಧಿತ ನಾಲ್ವರು ಆರೋಪಿಗಳು ಕಾರ್ಯಾಚರಣೆ ನಡೆಸುತ್ತಿದ್ದರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ₹ 10ರಿಂದ ₹20 ಸಾವಿರ ಕೊಟ್ಟು ಅವರ ಆಧಾರ್ ಕಾರ್ಡ್ ಸೇರಿ ಎಲ್ಲ ದಾಖಲೆಗಳನ್ನು ಪಡೆದು ವಿವಿಧ ಬ್ಯಾಂಕ್‌ಗಳಲ್ಲಿ ಚಾಲ್ತಿ ಖಾತೆ ತೆರೆಯುತ್ತಿದ್ದರು. ಅಲ್ಲದೇ ಅಂಗಡಿ ಬಾಡಿಗೆ ಪಡೆಯುತ್ತಿದ್ದರು.

ಅಂಗಡಿಗಳಿಗೆ ಬೇರೆ ಬೇರೆ ಕಂಪನಿ ಹೆಸರು ಇಡುತ್ತಿದ್ದರು. ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಆ್ಯಪ್‌ಗಳ ಮೂಲಕ ಸಾರ್ವಜನಿಕರನ್ನು ಸಂಪರ್ಕಿಸಿ ಅರೆಕಾಲಿಕ ಉದ್ಯೋಗ ನೀಡುವ ಭರವಸೆ ನೀಡುತ್ತಿದ್ದರು. ಅವರಿಗೆ ಟಾಸ್ಕ್‌ಗಳ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ಬಳಿಕ ಹಣವನ್ನೂ ವಾಪಸ್‌ ಮಾಡುತ್ತಿರಲಿಲ್ಲ. ಕೆಲಸವನ್ನೂ ಕೊಡುತ್ತಿರಲಿಲ್ಲ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.