ADVERTISEMENT

ಉಚಿತ ಕೊಡುಗೆ ಅರ್ಥ ವ್ಯವಸ್ಥೆಗೆ ಹೊರೆ: ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಕಳವಳ

ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಬಿಬೆಕ್ ದೆಬ್ರೋಯ್ ಕಳವಳ

​ಪ್ರಜಾವಾಣಿ ವಾರ್ತೆ
Published 30 ಜೂನ್ 2023, 23:34 IST
Last Updated 30 ಜೂನ್ 2023, 23:34 IST
ಕಾರ್ಯಕ್ರಮದಲ್ಲಿ ಬಿಬೇಕ್ ದೇಬ್ರಾಯ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಬೇಕ್ ದೇಬ್ರಾಯ್ ಮಾತನಾಡಿದರು.   

ಬೆಂಗಳೂರು: ‘ಉಚಿತ ಕೊಡುಗೆಗಳು ವಾಸ್ತವದಲ್ಲಿ ಉಚಿತವಾಗಿರುವುದಿಲ್ಲ. ಆ ಕೊಡುಗೆಯ ಹೊರೆಯನ್ನು ಬೇರೆಯವರ ಮೇಲೆ ಹೊರಿಸಲಾಗುತ್ತದೆ’ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಬಿಬೆಕ್ ದೆಬ್ರೋಯ್ ಕಳವಳ ವ್ಯಕ್ತಪಡಿಸಿದರು. 

ಚಾಣಕ್ಯ ವಿಶ್ವವಿದ್ಯಾಲಯ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ವಿಶೇಷ ಉಪನ್ಯಾಸದಲ್ಲಿ ‘ಭಾರತೀಯ ಆರ್ಥಿಕತೆಯಲ್ಲಿ ಪ್ರಮುಖ ಪರಿವರ್ತನೆಗಳು’ ವಿಷಯದ ಬಗ್ಗೆ ಮಾತನಾಡಿದರು. ‘ಉಚಿತ ಕೊಡುಗೆಗಳು ದೇಶದ ಅರ್ಥ ವ್ಯವಸ್ಥೆಗೆ ಒಳಿತು ಮಾಡುವುದಿಲ್ಲ. ಅರ್ಹ ಬಡವರಿಗೆ ಸಬ್ಸಿಡಿ ನೀಡಬೇಕು. ಆದರೆ, ಏನನ್ನೂ ಉಚಿತವಾಗಿ ನೀಡಬಾರದು. ಚೀನಾದ ಸರ್ಕಾರಿ ಬ್ಯಾಂಕ್ ನೀಡಿದ್ದ ಸಾಲವನ್ನು ಭರಿಸಲಾಗದೆ ಶ್ರೀಲಂಕಾ ದಿವಾಳಿ ಹಂತಕ್ಕೆ ತಲುಪಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯು ಶ್ರೀಲಂಕಾದ ಸಾಲವನ್ನು ಮರು ರಚನೆ ಮಾಡುತ್ತಿದೆ’ ಎಂದು ಹೇಳಿದರು. 

‘ದೇಶದ ಜನಸಂಖ್ಯೆಯ ಬೆಳವಣಿಗೆ ದರ ಶೇ 2.1ರಿಂದ ಶೇ 0.8ಕ್ಕೆ ಕುಸಿದಿದೆ. ಆದ್ದರಿಂದ ಭಾರತದಲ್ಲಿ ಜನಸಂಖ್ಯೆ ಸ್ಫೋಟಗೊಳ್ಳುತ್ತಿದೆ ಎಂಬ ಮನೋಭಾವದೊಂದಿಗೆ ಯೋಜನೆಗಳನ್ನು ರೂಪಿಸುವುದನ್ನು ಬಿಟ್ಟು, ಕುಸಿಯುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಬೇಕು. ಜನಸಂಖ್ಯೆಯ ಇಳಿಕೆಯನ್ನು ಆಧಾರವಾಗಿಟ್ಟುಕೊಂಡು ನಾವು ಆರ್ಥಿಕ ಚಟುವಟಿಕೆಗಳ ರೂಪುರೇಷೆ ಸಿದ್ಧಪಡಿಸಬೇಕು’ ಎಂದರು.

ADVERTISEMENT

ಚಾಣಕ್ಯ ವಿಶ್ವವಿದ್ಯಾಲಯದ ಕುಲಪತಿ ಎಂ.ಕೆ. ಶ್ರೀಧರ್, ವಿವಿಯ ಹಿರಿಯ ಅಧಿಕಾರಿಗಳಾದ ಎಂ.ಪಿ. ಕುಮಾರ್, ನಾಗರಾಜ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.