ADVERTISEMENT

Bengaluru Literature Fest: ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಹಿತ್ಯ ಸಂಭ್ರಮ

ಎರಡು ದಿನಗಳ ಬೆಂಗಳೂರು ಸಾಹಿತ್ಯ ಉತ್ಸವಕ್ಕೆ ಚಾಲನೆ -ಕೈದಿಗಳು, ಹೋರಾಟಗಾರರು ಮಲಗಿದ್ದ ಜಾಗದಲ್ಲಿ ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 20:28 IST
Last Updated 6 ಡಿಸೆಂಬರ್ 2025, 20:28 IST
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಮಕ್ಕಳು ಸಂಭ್ರಮಿಸಿದರು
ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಮಕ್ಕಳು ಸಂಭ್ರಮಿಸಿದರು ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್   

ಬೆಂಗಳೂರು: ವರ್ಷದ ಬಹುತೇಕ ದಿನಗಳು ಪ್ರತಿಭಟನೆಗಳಿಗೆ ವೇದಿಕೆಯಾಗುತ್ತಿದ್ದ ಸ್ವಾತಂತ್ರ್ಯ ಉದ್ಯಾನವು ಸಾಹಿತ್ಯ ಸಂಭ್ರಮಕ್ಕೆ ಸಾಕ್ಷಿಯಾದರೆ, ಕೈದಿಗಳು ಹಾಗೂ ಹೋರಾಟಗಾರರು ಮಲಗುತ್ತಿದ್ದ ಸ್ಥಳಗಳು ಗಹನವಾದ ಚರ್ಚೆಗಳಿಗೆ ವೇದಿಕೆಯಾಗಿದ್ದವು. 

ಎರಡು ದಿನಗಳ ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಗೆ ಶನಿವಾರ ಚಾಲನೆ ದೊರೆಯಿತು. ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರ ಓಡಾಟ ಇಡೀ ಉದ್ಯಾನಕ್ಕೆ ಹೊಸ ಮೆರಗು ನೀಡಿತ್ತು. ಹಿಂದೆ ಕೈದಿಗಳು ಮಲಗುತ್ತಿದ್ದ ಕೊಠಡಿಗಳೂ (ಬ್ಯಾರಕ್‌ಗಳು) ವಿಚಾರಗೋಷ್ಠಿಗೆ ವೇದಿಕೆಯಾಗಿದ್ದವು.  

ಪ್ರಮುಖವಾಗಿ ನಾಲ್ಕು ವೇದಿಕೆಗಳಲ್ಲಿ ನಡೆದ ವಿಚಾರಗೋಷ್ಠಿಗಳು ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಆಗುಹೋಗುಗಳನ್ನು ಕೇಂದ್ರೀಕರಿಸಿದ್ದವು. ಉತ್ಸವದ ಗೋಷ್ಠಿಗಳ ಮಾಹಿತಿ ಹೊಂದಿರುವ ಕರಪತ್ರಗಳೊಂದಿಗೆ ತಮ್ಮಿಷ್ಟದ ಗೋಷ್ಠಿಗಳನ್ನು ಆಲಿಸಲು ಬಂದಿದ್ದ ಕೆಲ ಸಾಹಿತ್ಯಾಸಕ್ತರು ನಿರಾಶರಾದ ಪ್ರಸಂಗವೂ ನಡೆಯಿತು. ಇಂಡಿಗೊ ಏರ್‌ಲೈನ್ಸ್‌ಗೆ ಸೇರಿದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾದ ಕಾರಣ ವಿಷಯ ತಜ್ಞರಲ್ಲಿ ಕೆಲವರು ಗೈರಾಗಿದ್ದರು. ಇದರಿಂದಾಗಿ ಬೇರೆ ವಿಷಯಗಳ ಮೇಲೆ ಗೋಷ್ಠಿಗಳು ನಡೆದವು. 

ADVERTISEMENT

ತಮ್ಮಿಷ್ಟದ ಬರಹಗಾರರ ಮಾತುಗಳನ್ನು ಆಲಿಸಿದ ಅಭಿಮಾನಿ ಬಳಗ, ಪುಸ್ತಕಗಳಿಗೆ ಅವರ ಹಸ್ತಾಕ್ಷರಗಳನ್ನು ಪಡೆದು ಸಂಭ್ರಮಿಸಿತು. ಮಕ್ಕಳಿಗಾಗಿಯೇ ವಯೋಮಿತಿ ಅನುಸಾರ ಮೂರು ವೇದಿಕೆಗಳನ್ನು ಸೃಷ್ಟಿಸಲಾಗಿತ್ತು. ಅಮರ ಚಿತ್ರಕಥಾ ರಸಪ್ರಶ್ನೆ, ಮನರಂಜನೆಯ ಕಾರ್ಯಕ್ರಮಗಳನ್ನೂ ಮಕ್ಕಳಿಗಾಗಿ ರೂಪಿಸಲಾಗಿತ್ತು. ಇದರಿಂದಾಗಿ ವಿವಿಧ ವಯೋಮಾನದ ಮಕ್ಕಳು ಆಟಗಳನ್ನು ಆಡಿ ಸಂಭ್ರಮಿಸಿದರು. 

‘ಸಮೀಕ್ಷೆಯಿಂದ ಜನರ ಬದುಕು ದರ್ಶನ’

‘ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯಿಂದ ಜನರ ವಾಸ್ತವ ಬದುಕು ದರ್ಶನ ಸಾಧ್ಯವಾಯಿತು’ ಎಂದು ಸಮೀಕ್ಷಾ ಅವಧಿಯ ಅನುಭವವನ್ನು ಬರಹಗಾರರೂ ಆಗಿರುವ ಸಮೀಕ್ಷಕರು ಹಂಚಿಕೊಂಡರು. 

‘ಸಮೀಕ್ಷೆಯಲ್ಲಿ ಕಂಡ ಬದುಕಿನ ಕಥೆಗಳು’ ಗೋಷ್ಠಿಯನ್ನು ಕಥೆಗಾರ ಅಬ್ದುಲ್ ರಶೀದ್ ನಿರ್ವಹಿಸಿದರು. ಶಿಕ್ಷಕರೂ ಆಗಿರುವ ಲೇಖಕಿ ಸುಧಾ ಅಡುಕುಳ ಕವಯತ್ರಿ ಹಸೀನಾ ಮಲ್ನಾಡ್ ಹಾಗೂ ಬರಹಗಾರ ಗುರುಪ್ರಸಾದ್ ಕಂತಲಗೆರೆ ಅವರು ಸಮೀಕ್ಷೆಯ ಅವಧಿಯಲ್ಲಿ ಎದುರಿಸಿದ ಸವಾಲು ಕಲಿತ ಪಾಠಗಳ ಬಗ್ಗೆ ವಿವರಿಸಿದರು. 

‘ನಾವು ಶಿಕ್ಷಕರೆಂಬ ಅಹಂನಿಂದ ಹೊರಬರಲು ಸಮೀಕ್ಷೆ ಸಹಕಾರಿಯಾಯಿತು. ವಿವಿಧ ವರ್ಗದ ಹಾಗೂ ವಯೋಮಾನದ ಜನರ ಜತೆಗಿನ ಸಂವಾದವು ಜನರ ಜೀವನ ದರ್ಶನ ಮಾಡುವ ಜತೆಗೆ ಅವರ ಜತೆಗೆ ಆಪ್ತ ಸಂಬಂಧ ಏರ್ಪಡಿಸಿತು’ ಎಂದು ಹೇಳಿದರು.  ಹಸೀನಾ ‘ವಿದ್ಯಾರ್ಥಿಗಳು ಕೌಟುಂಬಿಕ ಹಿನ್ನೆಲೆ ತಿಳಿಯಲು ಸಹಕಾರಿಯಾಯಿತು. ಬುರ್ಖಾ ಧರಿಸಿದ್ದರೂ ಎಲ್ಲರಂತೆ ಜನರನ್ನು ನೋಡಿದ್ದು ಜನರು ಉತ್ತಮವಾಗಿ ಸ್ಪಂದಿಸಿದರು’ ಎಂದರು. 

‘ಭಾಷಾ ವೈವಿಧ್ಯದಲ್ಲಿ ದೇಶದ ಸೌಂದರ್ಯ’
‘ಭಾಷಾ ವೈವಿಧ್ಯದಲ್ಲಿ ದೇಶದ ಸೌಂದರ್ಯ ಅಡಗಿದೆ. ಬಹುತ್ವವೇ ದೇಶದ ಜೀವಾಳ. ಯಾವುದೇ ಒಂದು ಭಾಷೆಯನ್ನು ಎಲ್ಲರೂ ಒಪ್ಪಲು ಸಾಧ್ಯವಿಲ್ಲ. ಹೆಚ್ಚು ಭಾಷೆಗಳನ್ನು ಕಲಿತಲ್ಲಿ ಜಗತ್ತನ್ನು ಹೆಚ್ಚು ಅರಿತುಕೊಳ್ಳಲು ಸಾಧ್ಯ. ಯಾವುದೇ ಒಂದು ಭಾಷೆಯನ್ನು ಹೇರಲು ಸಾಧ್ಯವಿಲ್ಲ. ಭಾಷಾ ರಾಜಕಾರಣಕ್ಕೆ ಅವಕಾಶ ನೀಡಬಾರದು’ ಎಂದು ವಿಷಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.  ‘ಒಂದು ದೇಶ ಒಂದೇ ಭಾಷೆಯನ್ನು ಮಾತನಾಡಬೇಕೇ?’ ಎಂಬ ಗೋಷ್ಠಿಯಲ್ಲಿ ಅನುವಾದಕಿ ದೀಪಾ ಭಾಸ್ತಿ ವಿಮರ್ಶಕ ಜಿ.ಎನ್. ದೇವಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಬರಹಗಾರ ಸಮಂತ್ ಸುಬ್ರಮಣಿಯನ್ ನಿರ್ವಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.