ADVERTISEMENT

ಬಯಲು ಶವಸಂಸ್ಕಾರ: ಮಾವಳ್ಳಿಪುರದಲ್ಲಿ ಪ್ರತಿಭಟನೆ

ಕೋರ್ಟ್‌ ಆದೇಶ ಪಾಲನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 21:40 IST
Last Updated 29 ಏಪ್ರಿಲ್ 2021, 21:40 IST
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರತಿಭಟನೆಯನ್ನು ನಿಲ್ಲಿಸುವಂತೆ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರತಿಭಟನೆಯನ್ನು ನಿಲ್ಲಿಸುವಂತೆ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು   

ಬೆಂಗಳೂರು: ಮಾವಳ್ಳಿಪುರದ ಬಯಲು ಪ್ರದೇಶದಲ್ಲಿ ಕೋವಿಡ್ ಶವ ಸಂಸ್ಕಾರಕ್ಕೆ ಮುಂದಾಗಿರುವ ಬಿಬಿಎಂಪಿ ಕ್ರಮ ಖಂಡಿಸಿ ಗ್ರಾಮಸ್ಥರು ಗುರುವಾರವೂ ಪ್ರತಿಭಟನೆ ಮುಂದುವರಿಸಿದರು.

ಬುಧವಾರದಿಂದ ಪ್ರತಿಭಟನೆ ಆರಂಭಿಸಿದ್ದ ಗ್ರಾಮಸ್ಥರು, ಬಿಬಿಎಂಪಿ ತನ್ನ ನಿರ್ಧಾರ ವಾಪಸ್ ತೆಗೆದುಕೊಳ್ಳುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಕೋವಿಡ್ ಕರ್ಫ್ಯೂ ಜಾರಿಯಲ್ಲಿ ಇದ್ದುದರಿಂದ ಒಂದೊಂದು ಕಡೆ ಕೇವಲ ಐದೈದು ಜನ ನಿಂತು ಪ್ರತಿಭಟಿಸಿದರು. ಬಿಬಿಎಂಪಿ, ಕಂದಾಯ ಇಲಾಖೆ ಮತ್ತು ಪೊಲೀಸ್‌ ವಾಹನಗಳು ಗ್ರಾಮವನ್ನು ಪ್ರವೇಶಿಸಿದಂತೆ ತಡೆದರು.

ADVERTISEMENT

‘ಬೆಂಗಳೂರು ನಗರದ ತ್ಯಾಜ್ಯವನ್ನು ಗ್ರಾಮದಲ್ಲಿ ತಂದು ಸುರಿಯಲಾಗುತ್ತಿದೆ. ಇದನ್ನು ವಿರೋಧಿಸಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೆವು. ಕಸದ ಸಮಸ್ಯೆಯಿಂದ ಗ್ರಾಮದ ಮೇಲಾಗುತ್ತಿರುವ ದುಷ್ಪರಿಣಾಮಗಳು ಮತ್ತು ಗ್ರಾಮದ ಜನ–ಜಾನುವಾರುಗಳ ಆರೋಗ್ಯ ಸಮೀಕ್ಷೆ ನಡೆಸಬೇಕು ಎಂದು ಹೈಕೋರ್ಟ್‌ ಹೇಳಿತ್ತು. ಆ ಕಾರ್ಯ ಆಗಿಲ್ಲ. ಇನ್ನು, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕು. ಅದರ ಮೂಲಕ ಕುಡಿಯುವ ನೀರು ಪೂರೈಸಬೇಕು ಎಂದೂ ನ್ಯಾಯಾಲಯ ಹೇಳಿತ್ತು. ಆದರೆ, ಬಹುತೇಕ ಘಟಕಗಳು ಕೆಟ್ಟು ನಿಂತಿವೆ. ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ’ ಎಂದು ಗ್ರಾಮದ ಮುಖಂಡ ಬಿ. ಶ್ರೀನಿವಾಸ ಹೇಳಿದರು.

‘ಹೈಕೋರ್ಟ್‌ ನೀಡಿದ್ದ ಮಾರ್ಗಸೂಚಿಗಳ ಪೈಕಿ ಶೇ 10ರಷ್ಟನ್ನೂ ಸರ್ಕಾರ ಪೂರೈಸಿಲ್ಲ. ಈಗ ಕೋವಿಡ್‌ ಶವಗಳ ಸಂಸ್ಕಾರಕ್ಕೆ ನಮ್ಮ ಗ್ರಾಮವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಮತ್ತೆ ಗ್ರಾಮಸ್ಥರ ಆರೋಗ್ಯದ ಮೇಲೆ ಇದು ಪರಿಣಾಮ ಬೀರಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕಂದಾಯ ಮತ್ತು ಬಿಬಿಎಂಪಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಸ್ಥಳೀಯರುಒಪ್ಪಿಕೊಳ್ಳಲಿಲ್ಲ. ಪ್ರತಿಭಟನೆ ಮುಂದುವರಿಸಿದ್ದಾರೆ.

ಬಿಬಿಎಂಪಿ ತನ್ನ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಪರಿಸರ ತಜ್ಞ ಲಿಯೊ ಸಲ್ಡಾನಾ ನೇತೃತ್ವದ ‘ಎನ್ವಿರಾನ್ಮೆಂಟಲ್‌ ಸೋಷಿಯಲ್‌ ಜಸ್ಟೀಸ್‌ ಅಂಡ್ ಗವರ್ನೆನ್ಸ್‌ ಇನ್ಸಿಯೇಟಿವ್ಸ್‌’ ಸಂಸ್ಥೆಯ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಪತ್ರ ಬರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.