ADVERTISEMENT

ಕನ್ನಡ ಕಾವ್ಯಕಟ್ಟಲು ಯುವ ಸಮೂಹ ಮುಂದಾಗಲಿ: ಜಿ.ಟಿ.ನರೇಂದ್ರಕುಮಾರ್

ಯುವಜನರಿಗಾಗಿ ಕುವೆಂಪು; ಕುವೆಂಪು ಓದು ಅಭಿಯಾನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 18:50 IST
Last Updated 5 ಫೆಬ್ರುವರಿ 2019, 18:50 IST
ವಡ್ಡಗೆರೆ ನಾಗರಾಜಯ್ಯ ಹಾಗೂ ಸಿ.ಎನ್.ಲೋಕಪ್ಪಗೌಡ ಚರ್ಚೆಯಲ್ಲಿ ತೊಡಗಿದ್ದರು. ಅಧ್ಯಯನ ಕೇಂದ್ರದ ಸಂಚಾಲಕ ಎಸ್‌.ಗೋವಿಂದಪ್ಪ, ಜಿ.ಟಿ.ನರೇಂದ್ರಕುಮಾರ್, ನಟರಾಜಪ್ಪ ಇದ್ದರು -  –ಪ್ರಜಾವಾಣಿ ಚಿತ್ರ
ವಡ್ಡಗೆರೆ ನಾಗರಾಜಯ್ಯ ಹಾಗೂ ಸಿ.ಎನ್.ಲೋಕಪ್ಪಗೌಡ ಚರ್ಚೆಯಲ್ಲಿ ತೊಡಗಿದ್ದರು. ಅಧ್ಯಯನ ಕೇಂದ್ರದ ಸಂಚಾಲಕ ಎಸ್‌.ಗೋವಿಂದಪ್ಪ, ಜಿ.ಟಿ.ನರೇಂದ್ರಕುಮಾರ್, ನಟರಾಜಪ್ಪ ಇದ್ದರು -  –ಪ್ರಜಾವಾಣಿ ಚಿತ್ರ   

ಬೆಂಗಳೂರು: 'ವಿದ್ಯಾರ್ಥಿಗಳು ಕ್ಯಾಂಟೀನ್‌ ಮತ್ತು ಮೈದಾನಗಳಲ್ಲಿ ಕಾಲಹರಣ ಮಾಡುವ ಬದಲಿಗೆ, ಕುವೆಂಪು ಅವರ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಅವರನ್ನು ಆದರ್ಶವಾಗಿಟ್ಟುಕೊಂಡು ಕನ್ನಡ ಕಾವ್ಯ ಕಟ್ಟಲು ಮುಂದಾಗಬೇಕು’ ಎಂದು ಸರ್ವೋದಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಜಿ.ಟಿ.ನರೇಂದ್ರಕುಮಾರ್ ಅಭಿಪ್ರಾಯಪಟ್ಟರು.

ಕುವೆಂಪು ಅವರ ವೈಚಾರಿಕ ಸಾಹಿತ್ಯವನ್ನು ಪರಿಚಯಿಸುವ ಉದ್ದೇಶದಿಂದ ಮಹಾರಾಣಿ ಕಲಾ ಕಾಲೇಜಿನ ಡಾ.ಬಿ.ಆರ್‌. ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಆಯೋಜಿಸಿದ್ದ ‘ಯುವಜನರಿಗಾಗಿ ಕುವೆಂಪು; ಕುವೆಂಪು ಓದು ಅಭಿಯಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕುವೆಂಪು ಅವರು ಯಾವುದೇ ಪ್ರಭುತ್ವದ ದಬ್ಬಾಳಿಕೆಗೆ ಹೆದರಲಿಲ್ಲ. ಅವರ ಕೃತಿಗಳಲ್ಲಿದ್ದ ಪುರೋಹಿತಶಾಹಿ ವಿರೋಧಿ ಧೋರಣೆಯನ್ನು ಎಷ್ಟೋ ಮಂದಿ ವಿರೋಧಿಸಿದ್ದರು’ ಎಂದು ನೆನಪಿಸಿಕೊಂಡರು.

ADVERTISEMENT

ಸಾಹಿತಿ ವಡ್ಡಗೆರೆ ನಾಗರಾಜಯ್ಯ, ‘ಮನುಜ ಮತ, ವಿಶ್ವಪಥ ಎಂದು ಧರ್ಮ, ಜಾತಿಗಳ ಗೋಡೆ ದಾಟಿ ನಿರುಕುಂಶಮತಿಗಳಾಗಿ ಎಂದು ಕರೆ ನೀಡಿದ ದಾರ್ಶನಿಕರು. ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ ಕುವೆಂಪು ಅವರು ತಮ್ಮ ಅಗಾಧ ಪಾಂಡಿತ್ಯದ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ' ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಲೋಕಪ್ಪಗೌಡ, ‘ಮಹಾಕಾವ್ಯ, ಜೀವನ ಚರಿತ್ರೆ, ನಾಟಕ, ಕತೆ, ಕಾದಂಬರಿ, ಮಕ್ಕಳ ಸಾಹಿತ್ಯ, ವೈಚಾರಿಕ ಬರಹ ಹೀಗೆ ಎಲ್ಲ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಿದ ಮಹಾನ್‌ ಚೇತನ’ ಎಂದು ಹೇಳಿದರು.

ನೆಲಸಿರಿ ಟ್ರಸ್ಟ್‌, ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ ಹಾಗೂ ‘ಪ್ರಜಾವಾಣಿ’ ಸಹಯೋಗದಲ್ಲಿ ಈ ಅಭಿಯಾನ ಏರ್ಪಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.