ADVERTISEMENT

ಮಾತಿಲ್ಲದವರ ಕೈ ಚಳಕದಲ್ಲಿ ಅರಳಿದ ಗಣಪ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 17:13 IST
Last Updated 17 ಸೆಪ್ಟೆಂಬರ್ 2023, 17:13 IST
ಕೆ.ಆರ್. ರೇಣುಕಪ್ಪ
ಕೆ.ಆರ್. ರೇಣುಕಪ್ಪ   

ದಾಬಸ್ ಪೇಟೆ: ಸಾಧಿಸುವ ಛಲ ಮತ್ತು ಅದಕ್ಕೆ ಸರಿಯಾದ ಪ್ರತಿಭೆ ಇದ್ದರೆ ಎಲ್ಲ ನ್ಯೂನತೆಯನ್ನು ಮೀರಿ ಬೆಳೆಯಬಹುದು ಎಂಬುದಕ್ಕೆ ಸಾಕ್ಷಿ ಕೆ.ಆರ್‌. ರೇಣುಕಪ್ಪ. ಕಿವಿ ಕೇಳಿಸದೇ, ಮಾತು ಬಾರದಿರುವ ಇವರ ಹುಟ್ಟು ಕೊರತೆಯನ್ನು ಮೀರಿ ಸುಂದರ ಗಣಪತಿ ಮೂರ್ತಿಗಳನ್ನು ಸೃಷ್ಟಿಸಿದ್ದಾರೆ.

ನೆಲಮಂಗಲ ತಾಲ್ಲೂಕಿನ, ಕಂಬಾಳು ಗ್ರಾಮದ ನಿವಾಸಿಯಾಗಿರುವ ಕೆ.ಆರ್. ರೇಣುಕಪ್ಪ ಅವರು ತನ್ನ ಹಿರಿಯರಿಂದ ಬಳುವಳಿಯಾಗಿ ಬಂದ ಈ ಮಣ್ಣಿನ ಕಾಯಕವನ್ನು ಮುಂದುವರಿಸಿದ್ದಾರೆ.   20 ವರ್ಷಗಳಿಂದ ಶ್ರದ್ದೆ, ಬದ್ಧತೆಯಿಂದ ಗಣೇಶನ ಮೂರ್ತಿಗಳನ್ನು ಮಾಡುತ್ತಾ ಬಂದಿದ್ದಾರೆ.

ಕಂಬಾಳು ಕೆರೆಯಿಂದ ಯೋಗ್ಯವಾದ ಮಣ್ಣು ಸಂಗ್ರಹಿಸಿ ತಂದು, ಗುಡ್ಡೆ ಹಾಕಿ ನಿತ್ಯ ಮೂರ್ತಿಗಳ ನಿರ್ಮಾಣಕ್ಕೆ ಎಷ್ಟು ಮಣ್ಣು ಬೇಕೋ ಅಷ್ಟು ನೆನೆಸಿ, ಹದಗೊಳಿಸಿ ಕಲೆಯ ಕಾಯಕ ಮುಂದುವರಿಸಿದ್ದಾರೆ.   ಗಣೇಶ ಚತುರ್ಥಿಗೆ ಮೂರು ತಿಂಗಳ ಮುಂಚಿತವಾಗಿ ಈ ಕೆಲಸಕ್ಕೆ ತೊಡಗಿಸಿಕೊಳ್ಳುವ ರೇಣುಕಪ್ಪ ಅವರು, ಅಂಗೈಯಲ್ಲಿ ಹಿಡಿಯಬಹುದಾದ ಚಿಕ್ಕ ಮೂರ್ತಿಯಿಂದ ಹಿಡಿದು, 5–6 ಅಡಿ ಎತ್ತರದ ಮೂರ್ತಿಗಳವರೆಗೆ ವಿಭಿನ್ನವಾದ ಗಣೇಶ ಮತ್ತು ಗೌರಿ ವಿಗ್ರಹಗಳನ್ನು ತಯಾರಿಸುತ್ತಾರೆ.

ADVERTISEMENT

ಕೆಲ ಮೂರ್ತಿಗಳಿಗೆ ನೈಸರ್ಗಿಕ ಬಣ್ಣ ಹಚ್ಚಿ, ಅಲಂಕರಿಸಿ ಮಾರಾಟ ಮಾಡುತ್ತಾರೆ. ತುಮಕೂರಿನ ಸಿದ್ದಗಂಗಾ ಮಠ, ಮಾಗಡಿಯ ಬಂಡೆ ಮಠ ಹಾಗೂ ಕಂಬಾಳು ಮಠಗಳಲ್ಲಿ ಪ್ರತಿ ವರ್ಷ ಇವರದ್ದೇ ಕೈಯಲ್ಲಿ ಅರಳಿದ ಗಣೇಶನನ್ನು ಪೂಜಿಸಲಾಗುತ್ತಿದೆ.

ಇಷ್ಟೇ ಹಣ ಎಂದು ರೇಣುಕಪ್ಪ ಬೆಲೆ ನಿಗದಿ ಮಾಡಿಲ್ಲ. ₹ 100ರಿಂದ ಹಿಡಿದು ಎಷ್ಟು ಕೊಡುತ್ತಾರೋ ಅಷ್ಟನ್ನೇ ಪಡೆದು ಗಣೇಶನನ್ನು ನೀಡುತ್ತಾರೆ. ಮಾರಾಟಕ್ಕೆಂದು ಬೇರೆಡೆಗೆ ಒಯ್ಯುವುದೂ ಇಲ್ಲ. ಮೂರ್ತಿ ಬೇಕಾದವರು ಇವರ ಮನೆ ಬಳಿಯೇ ಬರುತ್ತಾರೆ.   ಟೈಲರ್‌ ಕಾಯಕ: 3 ತಿಂಗಳು ಗಣೇಶ ಮೂರ್ತಿಗಳ ಸಿದ್ಧಪಡಿಸುವ ಕೆಲಸ ರೇಣುಕಪ್ಪ ಅವರು ಉಳಿದ ಸಮಯದಲ್ಲಿ ಟೈಲರ್‌ ಕಾಯಕದಲ್ಲಿ ನಿರತರಾಗಿರುತ್ತಾರೆ. ನಡುವೆ ಬೇರೆ ವಿಗ್ರಹಗಳು ಬೇಕು ಎಂದು ಬೇಡಿಕೆ ಬಂದರೆ ಅವುಗಳನ್ನು ಸಿದ್ಧಪಡಿಸಿ ಕೊಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.