ADVERTISEMENT

ಗಾಂಧಿ ಬಜಾರ್‌: ಪಾರ್ಕಿಂಗ್ ಸಮಸ್ಯೆಗೆ ಸಿಗಲಿದೆ ಮುಕ್ತಿ

ಖಲೀಲಅಹ್ಮದ ಶೇಖ
Published 29 ಜುಲೈ 2025, 0:17 IST
Last Updated 29 ಜುಲೈ 2025, 0:17 IST
ಬಸವನಗುಡಿಯ ಗಾಂಧಿಬಜಾರ್‌ನಲ್ಲಿ ನಿರ್ಮಿಸಿರುವ ಬಹುಮಹಡಿ ಕಾರ್ ಪಾರ್ಕಿಂಗ್ ಕಟ್ಟಡದ ಹೊರನೋಟ
ಪ್ರಜಾವಾಣಿ ಚಿತ್ರ:ರಂಜು ಪಿ.
ಬಸವನಗುಡಿಯ ಗಾಂಧಿಬಜಾರ್‌ನಲ್ಲಿ ನಿರ್ಮಿಸಿರುವ ಬಹುಮಹಡಿ ಕಾರ್ ಪಾರ್ಕಿಂಗ್ ಕಟ್ಟಡದ ಹೊರನೋಟ ಪ್ರಜಾವಾಣಿ ಚಿತ್ರ:ರಂಜು ಪಿ.   

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಬಸವನಗುಡಿಯ ಗಾಂಧಿಬಜಾರ್‌ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ ನೀಡುವ ಉದ್ದೇಶದಿಂದ ಬಹು ಮಹಡಿ ಕಾರ್‌ ಪಾರ್ಕಿಂಗ್ ಕಟ್ಟಡ ಸಿದ್ಧಗೊಂಡಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿದೆ. 

ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಡಿ ₹22 ಕೋಟಿ ವೆಚ್ಚದಲ್ಲಿ ಐದು ಅಂತಸ್ತಿನ ಬಹು ಮಹಡಿ ಕಟ್ಟಡ ನಿರ್ಮಿಸಲಾಗಿದೆ. ಪಾರಂಪರಿಕವಾದ ಗಾಂಧಿ ಬಜಾರ್‌ನ 80 ಅಡಿ ಅಗಲವಿದ್ದ ರಸ್ತೆಯನ್ನು 20 ಅಡಿಗೆ ಇಳಿಸಿ, ಪಾದಚಾರಿ ಮಾರ್ಗ ಹಾಗೂ ವ್ಯಾಪಾರ ಮಾಡಲು ಸ್ಥಳಾವಕಾಶ ನೀಡಲಾಗಿದೆ. ಗಾಂಧಿ ಬಜಾರ್‌ಗೆ ಬರುವ ಸಾರ್ವಜನಿಕರು ರಸ್ತೆಯಲ್ಲಿಯೇ  ವಾಹನ ನಿಲುಗಡೆ ಮಾಡುತ್ತಿದ್ದು ಇದರಿಂದ ಸಂಚಾರ ದಟ್ಟಣೆ ಆಗುತ್ತಿದೆ. ಈಗ ಬಹು ಮಹಡಿ ಕಾರು ಪಾರ್ಕಿಂಗ್‌ ಕಟ್ಟಡ ನಿರ್ಮಿಸಿರುವುದರಿಂದ ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸವಿದೆ. 

ಬಹುಮಹಡಿ ಕಾರ್ ಪಾರ್ಕಿಂಗ್ ಕಟ್ಟಡದ ಮೇಲ್ಭಾಗದಲ್ಲಿ ಶೀಟ್‌ ಅಳವಡಿಸಲಾಗುತ್ತಿದೆ 

ADVERTISEMENT

‘ಬಿಬಿಎಂಪಿಗೆ ಸೇರಿದ್ದ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ, 1,469 ಚದರ ಅಡಿ ವಿಸ್ತೀರ್ಣದಲ್ಲಿ ಕಾರುಗಳ ನಿಲುಗಡೆಗೆ ಬಹು ಮಹಡಿ ಕಟ್ಟಡ ನಿರ್ಮಿಸಲಾಗಿದೆ. ಕಾರು ಪಾರ್ಕಿಂಗ್‌ ಜೊತೆಗೆ ವಾಣಿಜ್ಯ ಉದ್ದೇಶಕ್ಕೂ ಅನುಕೂಲವಾಗುವಂತೆ ಕಟ್ಟಡ ನಿರ್ಮಿಸಲಾಗಿದೆ. ತಳ ಹಾಗೂ ನೆಲ ಮಹಡಿಯಲ್ಲಿ ಒಟ್ಟು 51 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಉಳಿದ ಅಂತಸ್ತುಗಳಲ್ಲಿ ಕಾರುಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು. 

‘2022ರ ಏಪ್ರಿಲ್‌ನಲ್ಲಿಯೇ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿತ್ತು. ಆದರೆ, ಆರಂಭದಲ್ಲಿ ಬಹುಮಹಡಿ ಕಾರು ನಿಲುಗಡೆ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಯಿತು. ವಿವಾದವು ನ್ಯಾಯಾಲಯದ ಮೆಟ್ಟಿಲೇರಿತ್ತು. ಆದ್ದರಿಂದ ಈ ಸ್ಥಳವನ್ನು ಸ್ಮಾರ್ಟ್‌ ಸಿಟಿ ಕಂಪನಿಗೆ ಹಸ್ತಾಂತರಿಸುವುದು ತಡವಾಯಿತು. ಗುತ್ತಿಗೆದಾರರಿಗೆ ನೀಡಿದ್ದ ಕಾರ್ಯಾದೇಶವೂ ರದ್ದಾಯಿತು. 2023ರಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ, ಗುತ್ತಿಗೆದಾರರಿಗೆ ಕಟ್ಟಡ ನಿರ್ಮಿಸಲು ಗುತ್ತಿಗೆ ನೀಡಲಾಯಿತು. ಈಗ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ’ ಎಂದರು. 

ಬಹುಮಹಡಿ ಕಾರ್ ಪಾರ್ಕಿಂಗ್ ಕಟ್ಟಡದ ನೆಲ ಮಹಡಿಯಲ್ಲಿರುವ ವಾಣಿಜ್ಯ ಮಳಿಗೆಗಳು

‘ಗಾಂಧಿ ಬಜಾರ್‌ಗೆ ಬರುವ ಸಾರ್ವಜನಿಕರು ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ, ಹೂವು, ಹಣ್ಣುಗಳನ್ನು ಖರೀದಿ ಮಾಡುತ್ತಾರೆ. ಇದರಿಂದ ಇಡೀ ರಸ್ತೆಯಲ್ಲಿ ಸಂಚಾರ ದಟ್ಟಣೆ ಆಗುತ್ತದೆ. ಈಗ ಕಾರು ಪಾರ್ಕಿಂಗ್‌ ಕಟ್ಟಡ ನಿರ್ಮಿಸಿರುವುದರಿಂದ ಗ್ರಾಹಕರು ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿದೆ. ಆದರೆ, ಪಾದಚಾರಿ ಮಾರ್ಗದಲ್ಲಿ ಹೂವು–ಹಣ್ಣು ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಅನುಕೂಲವಿದ್ದ ವ್ಯಾಪಾರಿಗಳು ಪಾರ್ಕಿಂಗ್‌ ಕಟ್ಟಡದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಪಡೆದು ವ್ಯಾಪಾರ–ವಹಿವಾಟು ನಡೆಸಲಿ. ಈ ಮಳಿಗೆಗಳನ್ನು ಬಾಡಿಗೆ ಪಡೆದುಕೊಳ್ಳುವಂತೆ ನಮಗೆ ಒತ್ತಾಯ ಮಾಡಬಾರದು. ನಾವು ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತೇವೆ’ ಎಂದು ಹೂವಿನ ವ್ಯಾಪಾರಿ ಕಮಲಮ್ಮ ಮನವಿ ಮಾಡಿದರು.

ಬಹುಮಹಡಿ ಕಾರ್ ಪಾರ್ಕಿಂಗ್ ಕಟ್ಟಡದ ಒಳ ನೋಟ ಪ್ರಜಾವಾಣಿ ಚಿತ್ರ:ರಂಜು ಪಿ.
ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಗಾಂಧಿ ಬಜಾರ್‌ನಲ್ಲಿ ನಿರ್ಮಿಸಿರುವ ಬಹು ಅಂತಸ್ತಿನ ಕಾರು ನಿಲುಗಡೆ ಕಟ್ಟಡ ಸಿದ್ಧಗೊಂಡಿದ್ದು ಶೀಘ್ರವೇ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ
ಮಹೇಶ್ವರ್‌ ರಾವ್‌ ಬಿಬಿಎಂಪಿ ಮುಖ್ಯ ಆಯುಕ್ತ

124 ವಾಹನಗಳ ನಿಲುಗಡೆಗೆ ಅವಕಾಶ

‘ಮೊದಲನೇ ಅಂತಸ್ತಿನಿಂದ ನಾಲ್ಕನೇ ಅಂತಸ್ತಿನವರೆಗೆ ಪ್ರತಿ ಅಂತಸ್ತಿಗೆ 31 ವಾಹನಗಳಂತೆ ಒಟ್ಟು 124 ವಾಹನಗಳ ನಿಲುಗಡೆಗೆ ಅವಕಾಶವಿದೆ. ಲಿಫ್ಟ್‌ ಇದೆ ಆರು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸದ್ಯ ಗಾಂಧಿ ಬಜಾರ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ಹೆಚ್ಚಿನ ಸ್ಥಳಾವಕಾಶವಿಲ್ಲ. ಆದ್ದರಿಂದ ಮಾರುಕಟ್ಟೆಗೆ ಬರುವ ವಾಹನ ಸವಾರರು ರಸ್ತೆಯ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದರು. ಇದರಿಂದ ಬೆಳಿಗ್ಗೆ ಮತ್ತು ಸಂಜೆ ಈ ಪ್ರದೇಶದಲ್ಲಿ ವಾಹನ ದಟ್ಟಣೆ ಆಗುತ್ತಿತ್ತು. ಈ ಪಾರ್ಕಿಂಗ್‌ ಕಟ್ಟಡದಲ್ಲಿ ಏಕಕಾಲಕ್ಕೆ ಒಟ್ಟು 124 ಕಾರುಗಳನ್ನು ನಿಲುಗಡೆ ಮಾಡಬಹುದಾಗಿದೆ. ಇದರಿಂದ ವಾಹನ ನಿಲುಗಡೆ ಸಮಸ್ಯೆ ಬಗೆಹರಿಯಲಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.

ಸಾರ್ವಜನಿಕರು ಏನಂತಾರೆ?

ಬಸವನಗುಡಿಯ ಗಾಂಧಿ ಬಜಾರ್‌ನ ಪಾದಚಾರಿ ಮಾರ್ಗದಲ್ಲಿ 20 ವರ್ಷಗಳಿಂದ ಹೂವಿನ ವ್ಯಾಪಾರ ಮಾಡುತ್ತಿದ್ದೇನೆ. ಈಗ ಬೃಹತ್‌ ಕಟ್ಟಡವೊಂದನ್ನು ನಿರ್ಮಿಸಲಾಗಿದೆ. ಇದರಲ್ಲಿ ಕಾರು ಪಾರ್ಕಿಂಗ್‌ ಜೊತೆಗೆ  ವಾಣಿಜ್ಯ ಮಳಿಗೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಈ ಭಾಗದ ಸಂಚಾರ ದಟ್ಟಣೆ ನಿವಾರಣೆ ಆಗಲಿದೆ
ರಾಜು ಹೂವಿನ ವ್ಯಾಪಾರಿ
ಗಾಂಧಿ ಬಜಾರ್‌ನಲ್ಲಿ ನಿರ್ಮಿಸಿರುವ ಕಾರು ಪಾರ್ಕಿಂಗ್‌ ಕಟ್ಟಡದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇಲ್ಲಿ ಹೂವು ಹಣ್ಣು ಬಟ್ಟೆ ಅಂಗಡಿಗಳು ಹೋಟೆಲ್‌ಗಳಿಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ನಿಲುಗಡೆ ಮಾಡುತ್ತಿದ್ದರು. ಈಗ ಕಾರು ಪಾರ್ಕಿಂಗ್‌ ಕಟ್ಟಡದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ.
ಶಂಕರ್‌ ಹಣ್ಣಿನ ವ್ಯಾಪಾರಿ
ವಾಹನ ಸವಾರರಿಗೆ ಹೊರೆಯಾಗದಂತೆ ಕಾರು ಪಾರ್ಕಿಂಗ್‌ ಶುಲ್ಕ ನಿಗದಿಪಡಿಸಬೇಕು. ಇಲ್ಲದಿದ್ದರೆ ಈ ಕಟ್ಟಡದಲ್ಲಿ ಯಾರೂ ವಾಹನಗಳ ನಿಲುಗಡೆ ಮಾಡುವುದಿಲ್ಲ. ಈ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಿ ಶುಲ್ಕ ನಿಗದಿಪಡಿಸುವುದು ಉತ್ತಮ. 
ಪ್ರಮೋದ್ ವಾಹನ ಸವಾರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.