ಬೆಂಗಳೂರು: ‘ಅಹಿಂಸೆ, ಶಾಂತಿಯಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ, ರಾಜ್ಯಸಭಾ ಸದಸ್ಯರೊಬ್ಬರು ಈಗ ಜನರ ರಕ್ಷಣೆಗೆ ವ್ಯಕ್ತಿಗತವಾಗಿ ಬಂದೂಕು, ಕುಡುಗೋಲು, ಕೊಡಲಿ ಖರೀದಿಸುವಂತೆ ಕರೆ ನೀಡುತ್ತಿದ್ದಾರೆ. ಹಿಂಸೆಯನ್ನು ಪ್ರಚೋದಿಸುವ ಅವರ ಮಾನಸಿಕ ಸ್ಥಿತಿಯನ್ನು ಕಿತ್ತೊಗೆಯಬೇಕು. ಇಲ್ಲದಿದ್ದರೆ ಗಾಂಧೀಜಿ ಅವರ ತತ್ವ ಸಿದ್ಧಾಂತಗಳು ಯಶಸ್ವಿ ಆಗುವುದಿಲ್ಲ’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಆಯೋಜಿಸಿದ್ದ ಗಾಂಧಿ ಜಯಂತಿ, ವಿಶ್ವ ಅಹಿಂಸಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜನರು ರಕ್ಷಣೆ ಮಾಡಿಕೊಳ್ಳುವುದಕ್ಕೆ ಅಸ್ತ್ರಗಳನ್ನು ಖರೀದಿಸಬೇಕು. ಅಸ್ತ್ರದ ಮೂಲಕವೇ ಉತ್ತರ ನೀಡಬೇಕು ಎಂಬ ರಾಜಕೀಯ ಪಕ್ಷದ ನಾಯಕರ ಪ್ರಚೋದನಕಾರಿ ಹೇಳಿಕೆಗಳು ಸರಿಯಲ್ಲ. ಜನರ ಮನಸಿನಲ್ಲಿ ಹಿಂಸೆಯನ್ನು ತುಂಬುವುದು ಅಪರಾಧ. ಯುವ ಸಮುದಾಯವು ಗಾಂಧೀಜಿ ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇಂತಹ ಹೇಳಿಕೆಗಳನ್ನು ಖಂಡಿಸಬೇಕು. ಗಾಂಧೀಜಿ ಅವರ ಮಾತು, ತತ್ವಗಳನ್ನು ಮೆಲುಕು ಹಾಕಿ ರಾಷ್ಟ್ರದ ಗೌರವವನ್ನು ಹೆಚ್ಚಿಸಬೇಕು’ ಎಂದು ಕರೆ ನೀಡಿದರು.
‘ವಿಶ್ವದ ಬೇರೆ–ಬೇರೆ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧಗಳನ್ನು ಸಿನಿಮಾ ರೀತಿಯಲ್ಲಿ ನೋಡುತ್ತಿದ್ದೇವೆ. ಈಗ ಬಾಂಬ್‌ಗಳನ್ನು ಬಳಸಿಕೊಂಡು ರಾಷ್ಟ್ರಗಳನ್ನು ದ್ವಂಸ ಮಾಡಲಾಗುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೆರಿಗೆಯನ್ನು ವಿಧಿಸುವ ಮೂಲಕ ದೇಶಗಳ ಆರ್ಥಿಕತೆಗೆ ಪೆಟ್ಟು ನೀಡುತ್ತಿರುವುದು ಒಂದು ರೀತಿಯ ಹಿಂಸೆಯೇ ಆಗಿದೆ’ ಎಂದು ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ. ಕೃಷ್ಣ ಮಾತನಾಡಿ, ‘ಸಾಮಾಜಿಕ ಜಾಲತಾಣಗಳಲ್ಲಿ ಗಾಂಧೀಜಿ ಅವರ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಅವರಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ. ಸತ್ಯ ಇರುವವರೆಗೆ ಗಾಂಧೀಜಿ ಇರುತ್ತಾರೆ’ ಎಂದರು.
ಇದೇ ಸಂದರ್ಭದಲ್ಲಿ ಜಿ.ಎನ್. ದಯಾನಂದ ಅವರ ಗಾಂಧಿ ಆಂತರ್ಯ ಪುಸ್ತಕಕ್ಕೆ ‘ಜಯಲಕ್ಷ್ಮೀ ಡಾ.ಹೊ. ಶ್ರೀನಿವಾಸಯ್ಯ ದತ್ತಿ’ ಪುರಸ್ಕಾರ ಪ್ರದಾನ ಮಾಡಲಾಯಿತು.
‘ಪ್ರೊ.ಜಿ.ಬಿ. ಶಿವರಾಜು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ರಾಜ್ಯ ಪ್ರಶಸ್ತಿ’ಯನ್ನು ಮಂಡ್ಯದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಕೆ.ಎಂ. ಪ್ರಸನ್ನಕುಮಾರ್ ಹಾಗೂ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭ ಮರವಂತೆ ಅವರಿಗೆ ಪ್ರದಾನ ಮಾಡಲಾಯಿತು. ‘ರಾಷ್ಟ್ರೀಯ ಸೇವಾ ಯೋಜನೆ ಉತ್ತಮ ಸ್ವಯಂ ಸೇವಕ ರಾಜ್ಯ ಪ್ರಶಸ್ತಿ’ಯನ್ನು ಮಂಡ್ಯದ ಸಚಿನ್ ಎಸ್.ಎಸ್., ಮೈಸೂರಿನ ಹರ್ಷವರ್ಧನ್, ರಾಯಚೂರಿನ ಸನಾ ಅಮ್ದಿಹಾಲ್, ಕೊಪ್ಪಳದ ಮಂಜುನಾಥ್ ಪವಾರ್ ಅವರಿಗೆ ಪ್ರದಾನ ಮಾಡಲಾಯಿತು.
ಸ್ವಾತಂತ್ರ್ಯ ಹೋರಾಟಗಾರ ಅಭಯ್ ಕುಮಾರ್, ಎನ್ಎಸ್‌ಎಸ್‌ನ ಅಧಿಕಾರಿ ಪ್ರತಾಪ್ ಲಿಂಗಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.