ADVERTISEMENT

ಬೆಂಗಳೂರು: ಅಹಿಂಸಾವಾದಿ, ಶಾಂತಿದೂತನ ಸ್ಮರಣೆ

ಮಹಾತ್ಮ ಗಾಂಧಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ: ಬೈಕ್‌ ಜಾಥಾ, ಸ್ಮರಣಾಂಜಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 22:03 IST
Last Updated 2 ಅಕ್ಟೋಬರ್ 2022, 22:03 IST
ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ನಡೆದ ಗಾಂಧಿ ಜಯಂತಿಯಲ್ಲಿ ವಕೀಲ ಪ್ರೊ.ರವಿವರ್ಮ ಕುಮಾರ್‌ ಅವರು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ನಡೆದ ಗಾಂಧಿ ಜಯಂತಿಯಲ್ಲಿ ವಕೀಲ ಪ್ರೊ.ರವಿವರ್ಮ ಕುಮಾರ್‌ ಅವರು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.   

ಬೆಂಗಳೂರು: ಮಹಾತ್ಮ ಗಾಂಧಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿಯನ್ನು ನಗರದಲ್ಲಿ ಭಾನುವಾರ ಆಚರಿಸಲಾಯಿತು.

ನಗರದ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿಕುಲಪತಿ ಡಾ.ಜೆ.ಸೂರ್ಯಪ್ರಸಾದ್‌ ಮಾತನಾಡಿ, ‘ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಅಹಿಂಸೆ ಚಳವಳಿ ಆರಂಭಿಸಿದ್ದರು. ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಪರಂಪರೆಯು ಇಂದಿನ ಪೀಳಿಗೆಗೂ ಸ್ಫೂರ್ತಿಯಾಗಿದೆ’ ಎಂದು ಹೇಳಿದರು.

ವಿಶ್ವವಿದ್ಯಾಲಯದ ಮ್ಯೂಸಿಕ್‌ ಕ್ಲಬ್‌ನ ವಿದ್ಯಾರ್ಥಿಗಳು ‘ಸ್ಮರಣಾಂಜಲಿ’ ಕಾರ್ಯಕ್ರಮ ನಡೆಸಿಕೊಟ್ಟರು.

ADVERTISEMENT

ಕುಲಸಚಿವ ಡಾ.ಕೆ.ಎಸ್‌.ಶ್ರೀಧರ್‌, ಡಾ.ವಿ.ಕೃಷ್ಣ, ಪ್ರೊ.ಎಂ.ವಿ.ಸತ್ಯನಾರಾಯಣ, ಡಾ.ಸಿ.ನಾರಾಯಣರೆಡ್ಡಿ, ಪ್ರೊ.ಎಚ್‌.ಎನ್‌.ದೇವರಾಜು ಇದ್ದರು.

ಬೆಂಗಳೂರು ನಗರ ವಿ.ವಿ: ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಅವರು ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

‘ಮಹಾತ್ಮ ಗಾಂಧಿಯವರ ತತ್ವಗಳು ದೇಶದ ಜನರಿಗೆ ಮಾದರಿಯಾಗಿದ್ದಾರೆ. ಅವರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸುವ ಮೂಲಕ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟರು. ಗಾಂಧೀಜಿ ಮಹಾನ್ ಚಿಂತಕ. ಸತ್ಯ, ಅಹಿಂಸೆಯ ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಲಿಂಗರಾಜು ನುಡಿದರು.

ನಾಲ್ಕು ತತ್ವಗಳು ನಿರಂತರ: ‘ಗಾಂಧೀಜಿ ಅವರ ಸ್ವದೇಶಿ, ಸ್ವರಾಜ್, ಸತ್ಯಾಗ್ರಹ ಹಾಗೂ ಅಹಿಂಸೆಯ ತತ್ವಗಳು ಎಲ್ಲ ಕಾಲಕ್ಕೂ ಪ್ರಸ್ತುತವಾದ ಪರಿಕಲ್ಪನೆಗಳು’ ಎಂದು ವಕೀಲ ಪ್ರೊ.ರವಿವರ್ಮಕುಮಾರ್‌ ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಗಾಂಧೀಜಿ ಅವರು ರಾಜಕಾರಣ ಹಾಗೂ ಚಳವಳಿಗಳನ್ನು ಹೊಸ ರೀತಿಯಲ್ಲಿ ವಿವರಿಸಿದರು. ದೈಹಿಕ ಶ್ರಮದ ಸಮುದಾಯವನ್ನು ಭಾರತದ ನಿಜವಾದ ಶ್ರಮಜೀವನದ ಪ್ರತೀಕವೆಂದು ಬಿಂಬಿಸಿದರು. ಭಾರತದ ಚರಕವನ್ನು ಮರುವಿವರಿಸಿದ ಗಾಂಧೀಜಿ, ಭಾರತದ ಹಳ್ಳಿಗಳನ್ನು ಮರುರೂಪಿಸಲು ಯತ್ನಿಸಿದರು. ಗಾಂಧೀಜಿ ಅವರ ಶಿಷ್ಯರಾದ ಲೋಹಿಯಾ ಸಹ ಗಾಂಧಿ ಹಾದಿಯಲ್ಲೇ ಚಳವಳಿ ರಾಜಕಾರಣ ಮಾಡಿದರು. ಜೆ.ಪಿ ಸಂಪೂರ್ಣ ಕ್ರಾಂತಿಯನ್ನು ರೂಪಿಸಿದರು’ ಎಂದರು.

ಕುಲಪತಿ ಪ್ರೊ.ಎಸ್‌.ಎಂ.ಜಯಕರ ಮಾತನಾಡಿ, ‘ಗಾಂಧೀಜಿ ಅಹಿಂಸೆಯ ಪ್ರತೀಕ. ನಡೆ-ನುಡಿಗಳನ್ನು ಬೆಸೆದ ಮಹಾತ್ಮರು’ ಎಂದು ಬಣ್ಣಿಸಿದರು.

ಚಲನಚಿತ್ರ ನಟ ಅಚ್ಯುತ್ ಕುಮಾರ್ ಮಾತನಾಡಿ, ‘ಸದಾ ನಮ್ಮೊಳಗಿನ ಗಾಂಧಿಯನ್ನು ಹುಡುಕಿಕೊಳ್ಳುತ್ತಿರಬೇಕು ಎಂದರು.

ಸೈಕಲ್‌, ಬೈಕ್‌ ಜಾಥಾ: ಕನಕಪುರ ರಸ್ತೆಯ ಮ್ಯಾಗ್ನಿಫಿಕ್ ಪಬ್ಲಿಕ್ ಸ್ಕೂಲ್, ವರ್ಲ್ಡ್ ಪೀಸ್ ಮ್ಯೂಸಿಯಂ ಟ್ರಸ್ಟ್ ಮತ್ತು ಬ್ರೀಥ್ ಎಂಟರ್‌ಟೈನ್‌ಮೆಂಟ್‌ ಆಶ್ರಯದಲ್ಲಿ ಶಾಂತಿ ದಿನ ಆಚರಣೆ ಮಾಡಲಾಯಿತು. ಶಾಂತಿ ದಿನದ ಅಂಗವಾಗಿ ಸೈಕಲ್‌ ಮತ್ತು ಬೈಕ್‌ ಜಾಥಾ, ಗಾಯನ, ನೃತ್ಯ ನಡೆಯಿತು.

ಬೆಳಿಗ್ಗೆ 8.30ಕ್ಕೆ ಲಾಲ್‌ಬಾಗ್ ಮುಖ್ಯ ಪ್ರವೇಶದ್ವಾರದಿಂದ ಬೈಕ್‌ ಹಾಗೂ ಸೈಕಲ್‌ ಜಾಥಾ ಆರಂಭವಾಯಿತು. ನಗರದಾದ್ಯಂತ ಸಂಚರಿಸಿ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಎದುರಿನ ಮ್ಯಾಗ್ನಿಫಿಕ್ ಪಬ್ಲಿಕ್ ಸ್ಕೂಲ್‌ನಲ್ಲಿ ಮುಕ್ತಾಯವಾಯಿತು.

ವರ್ಲ್ಡ್ ಪೀಸ್ ಮ್ಯೂಸಿಯಂ ಸಂಸ್ಥಾಪಕ ಜಾನ್ ದೇವರಾಜ್, ಕಿಶೋರ್ ಜೋಸೆಫ್, ಶಿಕ್ಷಣ ತಜ್ಞ ಮೊಯಿನುದ್ದೀನ್, ಡಾ.ಬಿ.ಎನ್.ಸತ್ಯನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.