ಗೌರಿ–ಗಣೇಶ ಹಬ್ಬ ಆಚರಿಸಿ ನಗರದ ಸ್ಯಾಂಕಿ ಕೆರೆಯಲ್ಲಿ ಮೂರ್ತಿಗಳನ್ನು ಬುಧವಾರ ವಿಸರ್ಜಿಸಲಾಯಿತು
ಪ್ರಜಾವಾಣಿ ಚಿತ್ರ /ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ಗಣೇಶ ಹಬ್ಬದ ದಿನವಾದ ಬುಧವಾರ ನಗರದಲ್ಲಿ 2.19 ಲಕ್ಷ ಮೂರ್ತಿಗಳನ್ನು ವಿಸರ್ಜಿಸಲಾಗಿದೆ.
ಹಲವು ಪ್ರದೇಶಗಳಲ್ಲಿ ಗಣೇಶ ಹಬ್ಬದ ದಿನ ಬೆಳಿಗ್ಗೆ ಮೂರ್ತಿಗೆ ಪೂಜೆ ನೆರವೇರಿಸಿ, ಸಂಜೆಯೇ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಬಿಬಿಎಂಪಿ ಸಜ್ಜುಗೊಳಿಸಿದ್ದ ಕೆರೆ, ಕಲ್ಯಾಣಿ, ಮೊಬೈಲ್ ಟ್ಯಾಂಕ್‌ಗಳಲ್ಲಿ, ಕೆಲವು ಕಡೆ ಮನೆಗಳಲ್ಲಿನ ತೊಟ್ಟಿ ಅಥವಾ ಬಕೆಟ್‌ಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಪಿಒಪಿ ಮೂರ್ತಿಗಳ ನಿಷೇಧವಿದ್ದರೂ ಯಡಿಯೂರು ಕೆರೆಯೊಂದಲ್ಲೇ 1,200 ಪಿಒಪಿ ಮೂರ್ತಿಗಳ ವಿಸರ್ಜನೆಯಾಗಿದೆ. ಇನ್ನುಳಿದ ಪ್ರದೇಶಗಳಲ್ಲೂ ಪಿಒಪಿ ಮೂರ್ತಿಗಳ ವಿಸರ್ಜನೆಯಾಗಿದೆ. ಆದರೆ, ಬಿಬಿಎಂಪಿ ಅಂಕಿ–ಅಂಶಗಳನ್ನು ನೀಡಿಲ್ಲ.
ಬಿಬಿಎಂಪಿಯ ಎಂಟೂ ವಲಯಗಳ ಕೆರೆಗಳಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಕಲ್ಯಾಣಿಗಳಲ್ಲಿ 1.53 ಲಕ್ಷ ಮೂರ್ತಿಗಳು, ಮೊಬೈಲ್ ಟ್ಯಾಂಕರ್‌ಗಳಲ್ಲಿ 65,717 ಮೂರ್ತಿಗಳು, ಯಡಿಯೂರು ಕೆರೆಯಲ್ಲಿ 3,800 ಕಾಗದದ ಮೂರ್ತಿಗಳು ವಿಸರ್ಜನೆಯಾಗಿವೆ.
‘ನಗರದಲ್ಲಿ ಜನರು ಪರಿಸರಸ್ನೇಹಿ ಮೂರ್ತಿಗಳನ್ನು ಪೂಜಿಸಿ ವಿಸರ್ಜನೆ ಮಾಡಿದ್ದಾರೆ. ಬಿಬಿಎಂಪಿಯ ಸೌಲಭ್ಯಗಳನ್ನು ಬಳಸಿಕೊಂಡಿದ್ದಾರೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದರು.
ಸ್ಯಾಂಕಿ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು
‘ಪಿಒಪಿ ಮೂರ್ತಿಗಳ ನಿಷೇಧವಿದ್ದರೂ ಜನರು ಅವುಗಳನ್ನೇ ಪೂಜಿಸಿ, ವಿಸರ್ಜನೆ ಮಾಡಿದ್ದಾರೆ. ಇಂತಹ ಮೂರ್ತಿಗಳನ್ನು ಬಳಸದಿರುವ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸ ವರ್ಷ ಪೂರ್ತಿ ನಡೆಸಬೇಕು’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.