ADVERTISEMENT

ಗೌರಿ–ಗಣೇಶ ಹಬ್ಬ: ತರಕಾರಿ -ಹೂವು ದರ ಕಡಿಮೆ, ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2023, 23:30 IST
Last Updated 16 ಸೆಪ್ಟೆಂಬರ್ 2023, 23:30 IST
<div class="paragraphs"><p>ಬಸವನಗುಡಿಯ ಗಾಂಧಿಬಜಾರ್ ಮುಖ್ಯ ರಸ್ತೆಯಲ್ಲಿ ಗಣೇಶ ಹಬ್ಬಕ್ಕಾಗಿ ಶನಿವಾರ ಜನರು ಹೂ ಹಣ್ಣು, ಬಾಳೆ ಕಂದು ಮತ್ತು ಇತರ ವಸ್ತುಗಳನ್ನು ಖರೀದಿಸಿದರು.</p></div>

ಬಸವನಗುಡಿಯ ಗಾಂಧಿಬಜಾರ್ ಮುಖ್ಯ ರಸ್ತೆಯಲ್ಲಿ ಗಣೇಶ ಹಬ್ಬಕ್ಕಾಗಿ ಶನಿವಾರ ಜನರು ಹೂ ಹಣ್ಣು, ಬಾಳೆ ಕಂದು ಮತ್ತು ಇತರ ವಸ್ತುಗಳನ್ನು ಖರೀದಿಸಿದರು.

   

–ಪ್ರಜಾವಾಣಿ ಚಿತ್ರ/ ರಂಜು ಪಿ

ಬೆಂಗಳೂರು: ಗೌರಿ, ಗಣೇಶ ಹಬ್ಬವನ್ನು ಸಂಭ್ರಮ–ಸಡಗರದಿಂದ ಆಚರಿಸಲು ನಗರದ ಜನತೆ ಸಜ್ಜಾಗುತ್ತಿದ್ದು, ಹಬ್ಬಕ್ಕೆ ಬೇಕಾದ ವಿಗ್ರಹ, ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಶನಿವಾರ ಜೋರಾಗಿತ್ತು.

ADVERTISEMENT

ವರಮಹಾಲಕ್ಷ್ಮಿ ಹಬ್ಬದಲ್ಲಿ ಗಗನಕ್ಕೇರಿದ್ದ ಹೂವು  ಹಣ್ಣು–ಹಂಪಲು ಸೇರಿ ಅಗತ್ಯ ವಸ್ತುಗಳ ಬೆಲೆ ಈಗ ಇಳಿದಿದೆ. ಆದರೆ, ಆ ಪ್ರಮಾಣದ ಗ್ರಾಹಕರು ಮಾರುಕಟ್ಟೆಗಳಲ್ಲಿ ಈ ಬಾರಿ ಕಂಡುಬರಲಿಲ್ಲ. ಗೌರಿ–ಗಣೇಶ ಹಬ್ಬಕ್ಕೆ ತರಕಾರಿ, ಹಣ್ಣು, ಹೂವಿನ ದರಗಳ ಸಾಕಷ್ಟು ಕಡಿಮೆಯಾಗಿದೆ.

ಕೆ.ಆರ್‌.ಮಾರುಕಟ್ಟೆಯಲ್ಲಿ ಬೆಳಗಿನ ಜಾವದ ವೇಳೆಗೇ ಜನ ಜಮಾಯಿಸಿದ್ದರು. ಚಿಕ್ಕಪೇಟೆಯ ಅವೆನ್ಯೂ ರಸ್ತೆ ಮತ್ತು ಸುತ್ತಮುತ್ತಲ ರಸ್ತೆಗಳಲ್ಲಿ ಜನದಟ್ಟಣೆ ಹೆಚ್ಚಿತ್ತು.

‘ಬಟಾಣಿ ಪ್ರತಿ ಕೆ.ಜಿಗೆ ₹100ರಂತೆ ಮಾರಾಟವಾಗುತ್ತಿದೆ. ಶತಕ ಬಾರಿಸಿದ್ದ ಟೊಮೆಟೊ ಕೆ.ಜಿ ₹15,  ಈರುಳ್ಳಿ ₹ 30, ಹಸಿಮೆಣಸಿನಕಾಯಿ ₹80ರಂತೆ ಮಾರಾಟವಾಗುತ್ತಿವೆ. ಅದನ್ನು ಬಿಟ್ಟು ಬಹುತೇಕ ತರಕಾರಿ ದರಗಳ ಕಡಿಮೆಯಾಗಿದೆ. ಮಾರುಕಟ್ಟೆಗೆ ತರಕಾರಿ ಪೂರೈಕೆ ಹೆಚ್ಚಿದ್ದು, ಬೇಡಿಕೆ ಕಡಿಮೆ ಇದೆ. ಆದ್ದರಿಂದ ಬೆಲೆಗಳಲ್ಲಿ ಇಳಿಕೆಯಾಗಿದೆ’ ಎಂದು ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿ ಅಕ್ರಂ, ತಬ್ರೇಜ್‌ ತಿಳಿಸಿದರು. 

ಹೆಚ್ಚಾದ ಹೂ ದರ: ‘ರಾಜ್ಯದಲ್ಲಿ ಮಳೆ ಕೊರತೆಯಿಂದ ಮಾರುಕಟ್ಟೆಗೆ ಹೂವು ಆವಕ ಕಡಿಮೆಯಾಗಿದ್ದು, ಆದ್ದರಿಂದ ಸ್ವಲ್ಪ ದುಬಾರಿಯಾಗಿದೆ. ಆದರೂ, ವರಮಹಾಲಕ್ಷ್ಮಿ ಹಬ್ಬದ ದರ‌ಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ’ ಎಂದು ಕೆ.ಆರ್. ಮಾರುಕಟ್ಟೆಯ ಹೂವಿನ ವ್ಯಾಪಾರಿ ಮಂಜುನಾಥ್ ಹೇಳಿದರು.

‘ಈ ಬಾರಿಯ ಗಣೇಶ ಹಬ್ಬದ ಸಂದರ್ಭದಲ್ಲಿ ಮಲ್ಲಿಗೆ ಕೆ.ಜಿ.ಗೆ ₹800, ಕನಕಾಂಬರ ₹1 ಸಾವಿರ ಇದೆ. ಸೇವಂತಿಗೆ ₹ 150, ಗುಲಾಬಿ ₹ 200, ಸುಗಂಧರಾಜ ₹200ರಂತೆ ಮಾರಾಟವಾಗುತ್ತಿವೆ’ ಎಂದು ತಿಳಿಸಿದರು.

ಗರಿಕೆ, ಬೇಲದಹಣ್ಣು, ಎಕ್ಕದ ಹೂವಿನಹಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿತ್ತು. ಜತೆಗೆ ಬಾಳೆಕಂಬ, ಹೂವಿನ ಹಾರ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಕೊಂಡೊಯ್ದರು. ಎಕ್ಕದ ಹಾರಕ್ಕೆ ₹50, ಗರಿಕೆಗೆ ₹30, ಪ್ರದೇಶವಾರು ದರದಲ್ಲಿ ವ್ಯತ್ಯಾಸವಿತ್ತು. ಬಾಳೆಕಂಬ ಜೋಡಿಗೆ ₹50ನಿಂದ ₹200 ವರೆಗೆ ಮಾರಾಟವಾಗುತ್ತಿದ್ದವು.

ಗಾಂಧಿ ಬಜಾರ್, ಜಯನಗರ, ಬಸವನಗುಡಿ, ಬನಶಂಕರಿ, ರಾಜಾಜಿನಗರ, ಮಲ್ಲೇಶ್ವರ ಸೇರಿ ನಗರದ ವಿವಿಧ ಭಾಗಗಳಲ್ಲಿ ಹೂವು, ಹಣ್ಣಿನ ತಾತ್ಕಾಲಿಕ ಮಳಿಗೆಗಳು, ಗಣೇಶ ಮೂರ್ತಿಯ ಅಂಗಡಿಗಳು ತಲೆ ಎತ್ತಿವೆ.

ಮಾರುಕಟ್ಟೆಗೆ ಬಗೆ ಬಗೆಯ ಗೌರಿ-ಗಣೇಶ ಮೂರ್ತಿಗಳು ಬಂದಿದ್ದು, ₹100 ರಿಂದ  ₹5 ಸಾವಿರದವರೆಗೆ ಮೂರ್ತಿಗಳು ಮಾರಾಟವಾಗುತ್ತಿವೆ. ಮತ್ತೊಂದೆಡೆ ಗೌರಿ ಹಬ್ಬ ಆಚರಿಸುವವರು ಗಜಗೌರಿ, ಮಡಿಗೌರಿ ಮತ್ತಿತರ ಬಗೆಯ ಗೌರಿಯ ಮೂರ್ತಿಗಳನ್ನು ಮಹಿಳೆಯರು ಖರೀದಿಸಿದರು.

ಹೆಸರಘಟ್ಟದ ಕಲಾವಿದೆ ಗೌರಿ ಅವರ ಮನೆಯಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳು ಮಾರಾಟಕ್ಕೆ ಸಿದ್ಧಪಡಿಸಿದರು. ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.