ಬೆಂಗಳೂರು: ವಿವಿಧ ಭಂಗಿಯಲ್ಲಿ ಕುಳಿತ ಗಣೇಶನ ಮೂರ್ತಿಗಳು ನಗರದ ವಿವಿಧೆಡೆ ರಾರಾಜಿಸುತ್ತಿದ್ದರೆ, ‘ಆಪರೇಷನ್ ಸಿಂಧೂರ’ದ ಮಹತ್ವ ಹಾಗೂ ‘ಧರ್ಮಸ್ಥಳದ ಮಹಾತ್ಮೆ’ ಸಾರಲು ಗಣೇಶೋತ್ಸವ ಸಮಿತಿಗಳು ನಿರ್ಧರಿಸಿವೆ.
ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿ ವರ್ಷ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಈ ವರ್ಷ ಮಾರುಕಟ್ಟೆಗೆ ತರಹೇವಾರಿ ಗಣೇಶ ಮೂರ್ತಿಗಳು ಬಂದಿದ್ದು, ವ್ಯಾಪಾರದ ಭರಾಟೆ ಜೋರಾಗಿದೆ. ಇನ್ನೊಂದೆಡೆ ಹೊಸ ಮತ್ತು ವಿಭಿನ್ನ ಥೀಮ್‌ಗಳನ್ನು ಪರಿಚಯಿಸುತ್ತಾ ಬಂದಿರುವ ಇಲ್ಲಿನ ಕೆಲ ಗಣೇಶ ಉತ್ಸವ ಸಮಿತಿಗಳು, ಈ ವರ್ಷ ಹೆಚ್ಚು ಸುದ್ದಿ ಮಾಡಿದ್ದ ‘ಆಪರೇಷನ್ ಸಿಂಧೂರ’ ಮತ್ತು ಧರ್ಮಸ್ಥಳವನ್ನು ವಿಷಯ ವಸ್ತುವಾಗಿ ಆಯ್ಕೆ ಮಾಡಿಕೊಳ್ಳಲು ಮುಂದಾಗಿವೆ. ಗಣೇಶನ ದರ್ಶನಕ್ಕೆ ಬಂದವರಿಗೆ ಪೋಸ್ಟರ್ ಸೇರಿ ವಿವಿಧ ಅಲಂಕಾರದ ಮೂಲಕ ಜಾಗೃತಿ ಮೂಡಿಸಲು ನಿರ್ಧರಿಸಿವೆ.
ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯು ‘ಆಪರೇಷನ್ ಸಿಂಧೂರ’ ಹಾಗೂ ಧರ್ಮಸ್ಥಳವನ್ನು ವಿಷಯ ವಸ್ತುವಾಗಿ ಆಯ್ಕೆ ಮಾಡಿಕೊಳ್ಳಲು ಕರೆ ನೀಡಿದೆ. ಈ ಸಮಿತಿಯ ಅಡಿ ನಗರದಲ್ಲಿ 2,500 ಸಮಿತಿಗಳಿವೆ.
ಪ್ರತಿ ವರ್ಷ ಈ ಸಮಿತಿಗಳು ಗಣೇಶನ ಆರಾಧನೆ ಜತೆಗೆ ಒಂದೊಂದು ವಿಷಯವನ್ನು ಆಯ್ಕೆ ಮಾಡಿಕೊಂಡು, ಜನರನ್ನು ಸೆಳೆಯುತ್ತಿವೆ. ಕಳೆದ ವರ್ಷ ಅಯೋಧ್ಯೆಯ ರಾಮಮಂದಿರವನ್ನು ಕೆಲ ಸಮಿತಿಗಳು ವಿಷಯ ವಸ್ತುವಾಗಿ ಆಯ್ಕೆ ಮಾಡಿಕೊಂಡು, ರಾಮಮಂದಿರದ ಪ್ರತಿರೂಪ, ಶ್ರೀರಾಮನ ಬೃಹತ್ ಪೋಸ್ಟರ್‌ಗಳನ್ನು ಅಳವಡಿಸಿದ್ದವು. ತಿರುಪತಿ ಸೇರಿ ವಿವಿಧ ಧಾರ್ಮಿಕ ಸ್ಥಳಗಳನ್ನೂ ಥೀಮ್ ಆಗಿ ಆಯ್ಕೆ ಮಾಡಿಕೊಂಡು, ಭಕ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದವು.
ಅರಿಶಿನ-ಕುಂಕುಮ: ಈ ವರ್ಷ ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದರು. ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ ಉಗ್ರರ ಈ ದಾಳಿಗೆ ಪ್ರತಿಯಾಗಿ, ಭಾರತೀಯ ಸೈನಿಕರು ‘ಆಪರೇಷನ್ ಸಿಂಧೂರ’ ನಡೆಸಿದ್ದರು. ಈ ಯಶಸ್ವಿ ಕಾರ್ಯಾಚರಣೆ ಸ್ಮರಣಾರ್ಥ, ಉತ್ಸವದ ಅವಧಿಯಲ್ಲಿ ಗಣೇಶನ ದರ್ಶನಕ್ಕೆ ಬಂದ ಮಹಿಳೆಯರಿಗೆ ಅರಿಶಿನ-ಕುಂಕುಮ ನೀಡಲು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಸೂಚಿಸಿದೆ.
‘ಶ್ರದ್ಧಾ ಭಕ್ತಿ ಕೇಂದ್ರವಾದ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗಿದೆ. ಜನರಲ್ಲಿನ ಗೊಂದಲ ಹೋಗಲಾಡಿಸಲು ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಅಳವಡಿಸಲು ಸೂಚಿಸಿದ್ದೇವೆ. ಜನರಿಗೆ ಸತ್ಯ ದರ್ಶನವಾಗಬೇಕು. ‘ಆಪರೇಷನ್ ಸಿಂಧೂರ’ ಸ್ಮರಣಾರ್ಥ ತಾಯಂದಿರಿಗೆ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಆಯಾ ಸಮಿತಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕಾರ್ಯಕ್ರಮ ಹಾಗೂ ವಿವಿಧ ವಿಷಯ ವಸ್ತುಗಳ ಮೇಲೆ ಅಲಂಕಾರ ಮಾಡಲಿವೆ’ ಎಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯು ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ತಿಳಿಸಿದರು.
ಜೇಡಿ ಮಣ್ಣಿನ ಗಣಪತಿ ಮೂರ್ತಿಗೆ ಬೇಡಿಕೆಯಿದೆ. ವರ್ಷದಿಂದ ವರ್ಷಕ್ಕೆ ಮಾರಾಟ ಹೆಚ್ಚುತ್ತಿದ್ದು ಮೂರ್ತಿಗಳಿಗೆ ನೈಸರ್ಗಿಕ ಬಣ್ಣವನ್ನು ಬಳಸಲಾಗುತ್ತಿದೆ
–ಭಾಗ್ಯ ಶಿವಕುಮಾರ್ ಕಲಾವಿದೆ ಹನುಮಂತನಗರ
ದೊಡ್ಡ ಗಣೇಶ ಮೂರ್ತಿಗಳನ್ನು ತಿರುಪತಿಯಿಂದ ಚಿಕ್ಕ ಮೂರ್ತಿಗಳನ್ನು ಗೋಕಾಕ್‌ನ ಕಣ್ಣೂರಿನಿಂದ ತರಿಸಿಕೊಳ್ಳುತ್ತಿದ್ದೇವೆ. ಮೂರ್ತಿ ಖರೀದಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ
–ಸುಬ್ರಮಣಿ ದೊಡ್ಡ ಬಸವಣ್ಣ ರಸ್ತೆಯಲ್ಲಿನ ವ್ಯಾಪಾರಿ
ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳೆಲ್ಲ ಸೇರಿ ಗಣಪತಿ ಪ್ರತಿಷ್ಠಾಪನೆ ಮಾಡುತ್ತಿದ್ದೇವೆ. ಪರಿಸರ ಈ ವರ್ಷದ ಥೀಮ್ ಆಗಿದ್ದು ಕಳೆದ ವರ್ಷ ದೇವಾಲಯ ವಿಷಯವಸ್ತುವಾಗಿತ್ತು
–ಧನುಷ್ ವಿನಾಯಕ ಗೆಳೆಯರ ಬಳಗ ಕದಿರೇನಹಳ್ಳಿ
ಪೇಪರ್ ಗಣೇಶ ಮೂರ್ತಿಗಳು
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳನ್ನು ನಿಷೇಧಿಸಿರುವುದರಿಂದ ಈ ಬಾರಿ ಮಾರುಕಟ್ಟೆಯಲ್ಲಿ ಪೇಪರ್ ಮತ್ತು ಜೇಡಿಮಣ್ಣು ಮಿಶ್ರಿತ ಗಣಪತಿ ಮೂರ್ತಿಗಳು ಕಾಣಸಿಗುತ್ತವೆ. ಅರ್ಧ ಅಡಿಯಿಂದ 14 ಅಡಿವರೆಗಿನ ಗಣೇಶ ಮೂರ್ತಿಗಳು ಮಾರುಕಟ್ಟೆಯಲ್ಲಿವೆ. ಮಾರಾಟಗಾರರು ತಮ್ಮ ವ್ಯಾಪಾರ ಕೇಂದ್ರಗಳ ಮುಂಭಾಗ ‘ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವುದಿಲ್ಲ’ ಎಂದು ಬ್ಯಾನರ್ ಹಾಕಿಕೊಂಡಿದ್ದಾರೆ. ಫೈಬರ್ ಗಣೇಶ ಮೂರ್ತಿಗಳೂ ಮಾರುಕಟ್ಟೆಯಲ್ಲಿದ್ದು ಮಾರಾಟಗಾರರು ಬಾಡಿಗೆಗೆ ನೀಡುತ್ತಿದ್ದಾರೆ. ‘ಪೇಪರ್ ಗಣೇಶ ಮೂರ್ತಿಗಳು ಹಗುರವಾಗಿರಲಿದ್ದು ನೀರಿನಲ್ಲಿಯೂ ಸುಲಭವಾಗಿ ಕರಗುತ್ತವೆ. ಸಾಗಾಟವೂ ಸುಲಭ. ಇವು ಪರಿಸರ ಸ್ನೇಹಿಯಾಗಿವೆ. ಹೈದರಾಬಾದ್ ತಮಿಳುನಾಡು ಸೇರಿ ವಿವಿಧೆಡೆಯಿಂದ ಮೂರ್ತಿಗಳು ಬರಲಿವೆ. ₹40 ಸಾವಿರದವರೆಗೂ ದರವಿದೆ’ ಎಂದು ಆರ್.ವಿ. ರಸ್ತೆಯ ಗಣಪತಿ ಮೂರ್ತಿ ವ್ಯಾಪಾರಿಗಳು ತಿಳಿಸಿದರು.
ಚಿಕ್ಕ ಮೂರ್ತಿಗಳಿಗೆ ಬೇಡಿಕೆ
ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಪರಿಸರ ಸ್ನೇಹಿ ಚಿಕ್ಕ ಮೂರ್ತಿಗಳಿಗೆ ಈ ವರ್ಷ ಬೇಡಿಕೆ ಹೆಚ್ಚಿದೆ. ಅಪಾರ್ಟ್‌ಮೆಂಟ್‌ಗಳು ಶಾಲಾ–ಕಾಲೇಜುಗಳು ಕೂಡ ಗಣಪತಿ ಮೂರ್ತಿಗಳನ್ನು ಕಾಯ್ದಿರಿಸಿಕೊಂಡಿವೆ. ಶಾಲೆಗಳು ಹೆಚ್ಚಾಗಿ ವಿದ್ಯಾ ಗಣಪತಿ ಮೂರ್ತಿಗಳನ್ನು ಖರೀದಿಸಿದರೆ ಅಪಾರ್ಟ್‌ಮೆಂಟ್ ಕ್ಷೇಮಾಭಿವೃದ್ಧಿ ಸಂಘಗಳು ನೈಸರ್ಗಿಕ ಬಣ್ಣ ಬಳಸಿ ತಯಾರಿಸಿದ ಮೂರ್ತಿಗಳ ಖರೀದಿಗೆ ಆಸಕ್ತಿ ತೋರುತ್ತಿವೆ. ಮೂರ್ತಿಗಳಿಗೆ ₹100ರಿಂದ ₹5000ದವರೆಗೆ ದರವಿದೆ.
‘ಆರ್‌ಸಿಬಿ ಕಪ್ ಗಣೇಶ’
ಯಶವಂತಪುರದ ಶ್ರೀ ಈಶಪುತ್ರ ಎಂಟರ್‌ಪ್ರೈಸಸ್ (ಎನ್‌ಆರ್ ಆರ್ಟ್ಸ್) ಯುವಕರ ತಂಡವು ಆರ್‌ಸಿಬಿ ಕಪ್ ಗೆದ್ದ ಗಣೇಶನನ್ನು ತಯಾರಿಸಿದೆ. ಆರ್‌ಸಿಬಿ ಕಪ್ ಮಾದರಿಯನ್ನು ಮೂಷಿಕ ಎತ್ತಿ ಹಿಡಿದಿದೆ. ದ್ರೌಪದಿಯ ಕರಗದ ರೂಪದ ಗಣೇಶನನ್ನೂ ನಿರ್ಮಿಸಲಾಗಿದೆ. ರಾಮಮಂದಿರದ ಮುಂದೆ ಕುಳಿತ ಗಣೇಶ ಕುದುರೆ ಏರಿದ ಗಣೇಶ ಸೇರಿ ವಿವಿಧ ವಿನ್ಯಾಸದ ಆಕರ್ಷಕ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಶಿವಗಣಪತಿ ಕೃಷ್ಣ ಗಣೇಶ ರಾಜ ದರ್ಬಾರ್ ಗಣಪ ಅರ್ಧನಾರೀಶ್ವರ ಗಣಪ ಕಮಲದ ಮೇಲೆ ಕುಳಿತ ಗಣೇಶ ಸೇರಿ ವಿವಿಧ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.