ADVERTISEMENT

ಗಂಗಾ ಕಲ್ಯಾಣ ಅಕ್ರಮ: ನಕಲಿ ದಾಖಲೆ ನೀಡಿ ಟೆಂಡರ್

* 2019–20 ಹಾಗೂ 2020–21ನೇ ಸಾಲಿನಲ್ಲಿ ಯೋಜನೆ ದುರುಪಯೋಗ * ಹಳೇ ಎಂ.ಡಿ ಸೇರಿ ಮೂವರ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 18 ಮೇ 2023, 20:47 IST
Last Updated 18 ಮೇ 2023, 20:47 IST

ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ನಡೆದಿರುವ ಆರೋಪ ವ್ಯಕ್ತವಾಗಿದ್ದು, ನಿಗಮದ ಮೂವರು ಅಧಿಕಾರಿಗಳ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ. ನಾಗೇಶ್ ಅವರು ಅಕ್ರಮದ ಬಗ್ಗೆ ದೂರು ನೀಡಿದ್ದಾರೆ. ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಸುರೇಶ್, ಹಿಂದಿನ ಮುಖ್ಯ ಪ್ರಧಾನ ವ್ಯವಸ್ಥಾಪಕ ಪ್ರಕಾಶ್ ಎಂ. ಹರಗಾಪುರೆ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್‌.ಟಿ. ಸೀತಾರಾಮ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಗಂಗಾ ಕಲ್ಯಾಣ ಯೋಜನೆ ಜಾರಿಗೆ ತರಲಾಗಿದೆ. ಇದೇ ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸದ್ಯದ ವ್ಯವಸ್ಥಾಪಕ ನಿರ್ದೇಶಕ ಕೆಲ ದಾಖಲೆ ನೀಡಿದ್ದಾರೆ. ಇನ್ನಷ್ಟು ದಾಖಲೆಗಳನ್ನು ಕಲೆಹಾಕಲಾಗುತ್ತಿದೆ. ಎಲ್ಲ ದಾಖಲೆ ಪರಿಶೀಲಿಸಿದ ಬಳಿಕ ಆರೋಪಿಗಳಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಎರಡು ಅವಧಿಯಲ್ಲಿ ಅಕ್ರಮ: ‘2019–20 ಮತ್ತು 2020–21ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆ ಜಾರಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಟೆಂಡರ್ ಆಹ್ವಾನಿಸಲಾಗಿತ್ತು. ಇದೇ ಟೆಂಡರ್ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದ ಬಿಡ್‌ದಾರರು, ನಕಲಿ ದಾಖಲಾತಿ ಸಲ್ಲಿಸಿದ್ದರೆಂಬ ಸಂಗತಿ ಇತ್ತೀಚೆಗೆ ಪತ್ತೆಯಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬಿಡ್‌ದಾರರು, ಟೆಂಡರ್ ನಿಯಮ ಉಲ್ಲಂಘಿಸಿ ಯಶಸ್ವಿ ಬಿಡ್‌ದಾರರಾಗಿ ಆಯ್ಕೆಗೊಂಡಿರುವುದು ಹಾಗೂ ಗಂಗಾ ಕಲ್ಯಾಣ ಯೋಜನೆ ದುರುಪಯೋಗವಾಗಿರುವ ಅಂಶವನ್ನು ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ತಿಳಿಸಿವೆ.

‘ಆರೋಪಿ ಕೆ.ಎಂ.ಸುರೇಶ್ ಅವರು ಟೆಂಡರ್ ಅಂಗೀಕಾರ ಪ್ರಾಧಿಕಾರದ ಅಧಿಕಾರಿಯಾಗಿದ್ದರು. ಇನ್ನೊಬ್ಬ ಆರೋಪಿ ಪ್ರಕಾಶ್ ಎಂ. ಹರಗಾಪುರೆ ಅವರು ಟೆಂಡರ್ ಪರಿಶೀಲನಾ ಪ್ರಾಧಿಕಾರದಲ್ಲಿದ್ದರು. ಮತ್ತೊಬ್ಬ ಆರೋಪಿ ಸೀತಾರಾಮ್, ಟೆಂಡರ್ ತಾಂತ್ರಿಕ ಪರಿಶೀಲನಾ ಸಮಿತಿ ಸದಸ್ಯರಾಗಿದ್ದರು. ಈ ಮೂವರು, ಬಿಡ್‌ದಾರರ ದಾಖಲೆಗಳ ಪರಿಶೀಲನೆಯನ್ನು ಸೂಕ್ತವಾಗಿ ನಡೆಸದೇ ಅಂಗೀಕರಿಸಿ ಅಕ್ರಮಕ್ಕೆ ಸಹಕಾರ ನೀಡಿರುವ ಆರೋಪವಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.