ಪ್ರಾತಿನಿಧಿಕ ಚಿತ್ರ
ಬೆಂಗಳೂರು: ‘ಸಾಮೂಹಿಕ ಅತ್ಯಾಚಾರ ನಡೆದಿದೆ’ ಎಂಬುದಾಗಿ ಯುವತಿಯೊಬ್ಬರು ನೀಡಿದ್ದ ದೂರಿನ ತನಿಖೆ ವೇಳೆ ಪ್ರಕರಣ ತಿರುವು ಪಡೆದುಕೊಂಡಿದೆ. ‘ಸಂತ್ರಸ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ; ಬದಲಿಗೆ ಸ್ನೇಹಿತನಿಂದಲೇ ಲೈಂಗಿಕ ದೌರ್ಜನ್ಯ ನಡೆದಿದೆ’ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ವೇಳೆ ದೂರುದಾರೆ ಗೊಂದಲಕಾರಿ ಹೇಳಿಕೆ ನೀಡಿದ್ದರು. ತನಿಖೆ ಮುಂದುವರಿಸಿದಾಗ ಪ್ರಿಯಕರನ ಎದುರು ಸತ್ಯ ಮುಚ್ಚಿಡಲು ಸುಳ್ಳು ದೂರು ದಾಖಲಿಸಿರುವುದು ಬಯಲಾಗಿದೆ.
ಸಂತ್ರಸ್ತೆ ಮೊದಲು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕ್ಯಾಬ್ ಚಾಲಕ ಮತ್ತು ಆತನ ಸ್ನೇಹಿತ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ, ಮಡಿವಾಳ ಪೊಲೀಸರು ಪ್ರಕರಣವನ್ನು ಬಾಣಸವಾಡಿ ಠಾಣೆಗೆ ವರ್ಗಾಯಿಸಿದ್ದರು. ದೂರಿನ ಅನ್ವಯ, ಕೇರಳ ಕ್ಯಾಬ್ ಚಾಲಕ ಸುರೇಶ್ ಎಂಬಾತನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದರು.
‘ಮಡಿವಾಳದಿಂದ ಕ್ಯಾಬ್ ಬುಕ್ ಮಾಡಿದ್ದ ಕೇರಳದ ಯುವತಿ, ತನ್ನದೇ ರಾಜ್ಯದ ಕ್ಯಾಬ್ ಚಾಲಕ ಸುರೇಶ್‌ಗೆ ಪರಿಚಿತರಾಗಿದ್ದರು. ಇಬ್ಬರೂ ಸ್ನೇಹಿತರಾಗಿ, ನಂತರ ಪರಸ್ಪರ ಒಪ್ಪಿಗೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದರು. ಪಾರ್ಟಿ, ಹೋಟೆಲ್ ಎಂದು ಸುತ್ತಾಟ ನಡೆಸಿದ್ದರು. ಆ ಸಂದರ್ಭದಲ್ಲಿ ಯುವತಿಗೆ ಸಣ್ಣ ಗಾಯವಾಗಿತ್ತು. ಕೆಲವು ದಿನ ಕಳೆದ ಮೇಲೆ ಯುವತಿ ಕೇರಳಕ್ಕೆ ತೆರಳಿ, ಸ್ನೇಹಿತನನ್ನು ಭೇಟಿ ಮಾಡಿದ್ದರು. ಗಾಯದ ಬಗ್ಗೆ ಪ್ರಿಯಕರ ಕೇಳಿದ್ದರು. ಆಗ ಯುವತಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬುದಾಗಿ ಹೇಳಿದ್ದರು. ಗೆಳತಿಯ ಮಾತು ನಂಬಿದ್ದ ಪ್ರಿಯಕರ, ಪ್ರಿಯತಮೆಯನ್ನು ಬೆಂಗಳೂರಿಗೆ ಕರೆದುತಂದು ದೂರು ದಾಖಲಿಸಿದ್ದರು’ ಎಂದು ಮೂಲಗಳು ಹೇಳಿವೆ.
‘ತನಿಖೆ ವೇಳೆ ಯುವತಿ ಹಾಗೂ ಆರೋಪಿ ಸುರೇಶ್ ವಾಟ್ಸ್‌ಆ್ಯಪ್ ಪರಿಶೀಲನೆ ನಡೆಸಲಾಯಿತು. ಅವರಿಬ್ಬರಿಗೂ ಮೊದಲೇ ಪರಿಚಯ ಇರುವುದು ಪತ್ತೆ ಆಯಿತು. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಭೇಟಿ ಮಾಡಿರುವುದಕ್ಕೂ ಸಾಕ್ಷಿಗಳು ಲಭ್ಯವಾಗಿವೆ. ಆರೋಪಿ ಸಹ ಇಬ್ಬರ ಒಪ್ಪಿಗೆಯಿಂದಲೇ ಲೈಂಗಿಕ ಕ್ರಿಯೆ ನಡೆದಿರುವುದಾಗಿ ಹೇಳಿಕೆ ನೀಡಿದ್ದಾನೆ’ ಎಂದು ಮೂಲಗಳು ಹೇಳಿವೆ.
‘ಯುವತಿ ಹೇಳಿಕೆಯನ್ನೂ ದಾಖಲು ಮಾಡಲಾಗಿದೆ. ಪ್ರಕರಣದಲ್ಲಿ ಈ ಮೊದಲು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಇದೀಗ ಕ್ಯಾಬ್ ಚಾಲಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.