ADVERTISEMENT

ಗಾಂಜಾ ಮಾರುತ್ತ 25 ಬೈಕ್ ಕದ್ದರು; ಎಂಟು ಮಂದಿ ಬಂಧನ

ನಂದಿನಿ ಲೇಔಟ್ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:45 IST
Last Updated 25 ಜುಲೈ 2019, 19:45 IST
ಬಂಧಿತ ಆರೋಪಿಗಳು ಹಾಗೂ ಜಪ್ತಿ ಮಾಡಲಾದ ಬೈಕ್‌ಗಳು
ಬಂಧಿತ ಆರೋಪಿಗಳು ಹಾಗೂ ಜಪ್ತಿ ಮಾಡಲಾದ ಬೈಕ್‌ಗಳು   

ಬೆಂಗಳೂರು: ನಗರದಲ್ಲಿ ಗಾಂಜಾ ಮಾರುತ್ತಲೇ 25 ದ್ವಿಚಕ್ರ ವಾಹನಗಳನ್ನು ಕದ್ದಿದ್ದ ತಮಿಳುನಾಡಿನ ಗ್ಯಾಂಗನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ತಮಿಳುನಾಡು ಕೃಷ್ಣಗಿರಿಯ ಪರಮೇಶ್ ಅಲಿಯಾಸ್ ಬಾಕು (21), ಸೈಯದ್‍ ಫಾರೂಕ್ (21), ಬಸವರಾಜ್ (20) ಹಾಗೂ ಬಾಲಾಜಿ (18) ಎಂಬುವರು ಬಂಧಿತ ಆರೋಪಿಗಳು.

ಬಂಧಿತರಿಂದ ಗಾಂಜಾ ಖರೀದಿಸುತ್ತಿದ್ದ ಆರೋಪದಡಿ ಬೆಂಗಳೂರು ನಂದಿನಿ ಲೇಔಟ್‌ ನಿವಾಸಿಗಳಾದ ರಾಹುಲ್ ಅಲಿಯಾಸ್ ಸೈಯದ್ ಸಾದಿಕ್ (19), ಸೈಯದ್ ದಾವೂದ್ ಅಲಿಯಾಸ್ ದಾವೂದ್ (19) ಮತ್ತು ಕದ್ದ ಬೈಕ್‌ಗಳನ್ನು ಕೊಂಡುಕೊಳ್ಳುತ್ತಿದ್ದ ತಮಿಳುನಾಡಿನ ತಿಮ್ಮರಾಜು (33) ಹಾಗೂ ಅರುಣ್ (21) ಎಂಬುವರನ್ನೂ ಸೆರೆ ಹಿಡಿಯಲಾಗಿದೆ.

ADVERTISEMENT

ಬಂಧಿತ ಆರೋಪಿಗಳಿಂದ₹ 20 ಲಕ್ಷ ಮೌಲ್ಯದ 25 ದ್ವಿಚಕ್ರ ವಾಹನಗಳು ಹಾಗೂ 400 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ.

ಗಾಂಜಾ ಮಾರಾಟಕ್ಕೆ ಬಂದು ಸಿಕ್ಕಿಬಿದ್ದರು: ‘ತಿಂಗಳಿಗೊಮ್ಮೆ ಗಾಂಜಾಸಮೇತ ನಗರಕ್ಕೆ ಬರುತ್ತಿದ್ದ ಆರೋಪಿಗಳು, ಇಲ್ಲಿಯ ಮಾರಾಟಗಾರರಿಗೆ ಕೊಟ್ಟು ಹಣ ಪಡೆದುಕೊಂಡು ವಾಪಸು ಹೋಗುತ್ತಿದ್ದರು. ಅಲ್ಲದೆ, ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನೂ ಕದ್ದೊಯ್ಯುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಇದೇ 12ರಂದು ಇಲ್ಲಿನ ಕೂಲಿ ನಗರದ ದೊಡ್ಡಮ್ಮನ ದೇವಸ್ಥಾನದ ಬಳಿ ಬಂದಿದ್ದ ಆರೋಪಿಗಳು, ಪ್ಲಾಸ್ಟಿಕ್ ಚೀಲಗಳನ್ನು ಹಿಡಿದುಕೊಂಡಿದ್ದರು. ಅವರ ನಡೆ ಬಗ್ಗೆ ಅನುಮಾನಗೊಂಡ ಸ್ಥಳೀಯರೊಬ್ಬರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ನಾಲ್ವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾವುಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡರು’ ಎಂದರು.

‘ಆರೋಪಿಗಳ ವಿಚಾರಣೆ ನಡೆಸಿದಾಗ, ರಾಹುಲ್ ಹಾಗೂ ಸೈಯದ್ ದಾವೂದ್‌ ಎಂಬುವರಿಗೆ ಗಾಂಜಾ ಮಾರಲು ಬಂದಿರುವುದಾಗಿ ಹೇಳಿದರು. ಅದರಂತೆ ಆ ಇಬ್ಬರೂ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಮಾಹಿತಿ ನೀಡಿದರು.

ತಮಿಳುನಾಡಿಗೆ ಹೋಗಿದ್ದ ವಿಶೇಷ ಪೊಲೀಸ್ ತಂಡ, ಕದ್ದ ಬೈಕ್‌ ಖರೀದಿಸಿದ್ದ ಆರೋಪದಡಿ ಇಬ್ಬರನ್ನೂ ಬಂಧಿಸಿ ನಗರಕ್ಕೆ ಕರೆತಂದಿದೆ.

14 ಬೈಕ್ ಮಾಲೀಕರಿಗಾಗಿ ಹುಡುಕಾಟ

ಆರೋಪಿಗಳಿಂದ ಜಪ್ತಿ ಮಾಡಲಾಗಿರುವ 25 ಬೈಕ್‌ಗಳ ಪೈಕಿ 11 ಬೈಕ್‌ಗಳ ಮಾಲೀಕರು ಪತ್ತೆಯಾಗಿದ್ದರು. ಇನ್ನುಳಿದ 14 ಬೈಕ್‌ಗಳ ಮಾಲೀಕರು ಯಾರು ಎಂಬುದನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.

‘ಅತ್ತಿಬೆಲೆ, ಹೆಬ್ಬಗೋಡಿ, ಕಾಡುಗೋಡಿಯಲ್ಲಿ ತಲಾ 2, ಅನ್ನಪೂರ್ಣೆಶ್ವರಿನಗರ, ವಿಜಯನಗರ, ಮೈಕೋ ಲೇಔಟ್, ರಾಮಮೂರ್ತಿ ನಗರ, ಜೆ.ಸಿ.ನಗರ ಠಾಣೆಯ ವ್ಯಾಪ್ತಿಯಲ್ಲಿ ತಲಾ 1 ಬೈಕ್‌ ಅನ್ನು ಆರೋಪಿಗಳು ಕದ್ದಿರುವುದು ತನಿಖೆಯಿಂದ ಗೊತ್ತಾಗಿದೆ. ಉಳಿದ ಬೈಕ್‌ ಎಲ್ಲಿ ಕದ್ದಿದ್ದರು ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.