ADVERTISEMENT

ನಕಲಿ ಗುರುತಿನ ಚೀಟಿ ಬಳಸಿ ಗಾಂಜಾ ಸಾಗಣೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 16:28 IST
Last Updated 1 ಸೆಪ್ಟೆಂಬರ್ 2022, 16:28 IST

ಬೆಂಗಳೂರು: ರೈಲ್ವೆ ಇಲಾಖೆ ನೌಕರನೆಂದು ಹೇಳಿಕೊಂಡು ಗಾಂಜಾ ಸಾಗಿಸುತ್ತಿದ್ದ ಆರೋಪಿ ಮೊಹಮ್ಮದ್ ಅಶ್ಫಕ್ ಎಂಬುವವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

‘ಅಸ್ಸಾಂನ ಅಶ್ಫಕ್ ಕೆಲ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ. ತನ್ನದೇ ಊರಿನಿಂದ ಬೆಂಗಳೂರಿಗೆ ಗಾಂಜಾ ತಂದು ಮಾರುತ್ತಿದ್ದ. ಈತನ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ರೈಲ್ವೆ ಇಲಾಖೆಯ ನೌಕರನೆಂದು ನಕಲಿ ಗುರುತಿನ ಚೀಟಿ ಇಟ್ಟುಕೊಂಡಿದ್ದ ಆರೋಪಿ, ನಿಲ್ದಾಣದಲ್ಲಿ ಯಾರಾದರೂ ಪ್ರಶ್ನಿಸಿದರೆ ಅದನ್ನು ತೋರಿಸಿ ಪಾರಾಗುತ್ತಿದ್ದ’ ಎಂದು ತಿಳಿಸಿವೆ.

ADVERTISEMENT

ಸಿಬ್ಬಂದಿ ಜೊತೆ ಒಡನಾಟ: ‘ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಜೊತೆ ಒಡನಾಟ ಹೊಂದಿದ್ದ ಆರೋಪಿ, ಅವರ ಸಹಾಯದಿಂದಲೇ ಗಾಂಜಾ ಸಾಗಿಸುತ್ತಿದ್ದ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಸ್ಸಾಂನಿಂದ ರೈಲಿನ ಶೌಚಾಲಯಗಳಲ್ಲಿ ಗಾಂಜಾ ಪೊಟ್ಟಣ ಬಚ್ಚಿಟ್ಟು ಬೆಂಗಳೂರಿಗೆ ತರಿಸಲಾಗುತ್ತಿತ್ತು. ಸಿಬ್ಬಂದಿ ಸಹಾಯದಿಂದ ಪೊಟ್ಟಣವನ್ನು ಆರೋಪಿ ಪಡೆಯುತ್ತಿದ್ದ. ಇದಕ್ಕಾಗಿ ಸಿಬ್ಬಂದಿಗೆ ಹಣ ನೀಡುತ್ತಿದ್ದ’ ಎಂದು ತಿಳಿಸಿವೆ.

ಗದಗ ಯುವತಿ ಮದುವೆ: ‘ಅಸ್ಸಾಂನಲ್ಲಿ ಒಂದು ಮದುವೆಯಾಗಿದ್ದ ಆರೋಪಿ, ಆ ವಿಷಯ ಮುಚ್ಚಿಟ್ಟು ಗದಗ ಯುವತಿಯನ್ನು ಎರಡನೇ ಮದುವೆಯಾಗಿದ್ದ. ಎರಡೂ ಕುಟುಂಬಗಳ ನಿರ್ವಹಣೆಗೆ ಹಣ ಹೊಂದಿಸಲು ಆರೋಪಿ ಗಾಂಜಾ ಮಾರಾಟಕ್ಕೆ ಇಳಿದಿದ್ದನೆಂದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.