ಬೆಂಗಳೂರು: ಕಾರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಗಿರಿನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ನಿವಾಸಿ ನಹೀಮ್ ಅಹ್ಮದ್(34) ಬಂಧಿತ ಆರೋಪಿ.
ಆರೋಪಿಯಿಂದ 21.93 ಕೆ.ಜಿ. ಗಾಂಜಾ, ₹2.90 ಲಕ್ಷ ನಗದು, 88 ಗ್ರಾಂ ಚಿನ್ನಾಭರಣ, ಐದು ಮೊಬೈಲ್ ಫೋನ್‌ಗಳು, ಕಾರು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಇಮ್ರಾನ್ ಸೇರಿ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಬನಶಂಕರಿ ಸಂಚಾರ ಠಾಣೆ ಪೊಲೀಸರು ನಾಯಂಡಹಳ್ಳಿ–ಕನಕಪುರ ರಸ್ತೆಯಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದರು. ಆಗ ಆರೋಪಿ ತನ್ನ ಸ್ವಿಫ್ಟ್ ಕಾರಿನಲ್ಲಿ ನಾಯಂಡಹಳ್ಳಿಯಿಂದ ಕನಕಪುರ ಕಡೆ ಹೋಗುತ್ತಿದ್ದ. ಕಾರಿನ ಕಿಟಕಿಗಳಿಗೆ ಟಿಂಟೆಡ್ ಗ್ಲಾಸ್ ಹಾಕಲಾಗಿತ್ತು. ಜತೆಗೆ, ಆರೋಪಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಚಾಲನೆ ಮಾಡುತ್ತಿದ್ದ. ಅದನ್ನು ಗಮನಿಸಿದ್ದ ಸಂಚಾರ ಪೊಲೀಸರು ವಾಹನ ನಿಲುಗಡೆ ಮಾಡುವಂತೆ ಸೂಚಿಸಿದ್ದರು. ಆದರೆ, ಆತ ಪರಾರಿಯಾಗಲು ಯತ್ನಿಸಿದ್ದ. ಕೊನೆಗೆ ಕಾರನ್ನು ತಡೆಯುತ್ತಿದ್ದಂತೆಯೇ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಚಾಲಕನನ್ನು ಬಿಟ್ಟು ಪರಾರಿಯಾಗಿದ್ದರು. ಬಳಿಕ ಕಾರಿನ ಒಳಗಡೆ ಚೀಲಗಳಲ್ಲಿ 21 ಕೆ.ಜಿ. ಗಾಂಜಾ, ನಗದು ಪತ್ತೆಯಾಗಿತ್ತು. ಕೂಡಲೇ ಗಿರಿನಗರ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ನಹೀಮ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು ಎಂದು ಮೂಲಗಳು ಹೇಳಿವೆ.
‘ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಕಾರು ಬುಕ್ ಮಾಡಿ, ಕನಕಪುರ ಕಡೆ ಹೋಗಬೇಕೆಂದು ₹5 ಸಾವಿರ ಕೊಡುವುದಾಗಿ ಹೇಳಿದ್ದರು. ಹೀಗಾಗಿ ಬಾಡಿಗೆಗೆ ಹೋಗುತ್ತಿದ್ದೆ’ ಎಂಬುದಾಗಿ ನಹೀಮ್ ಅಹ್ಮದ್ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.