ಪ್ರಜಾವಾಣಿ ವಾರ್ತೆ
ಬೆಂಗಳೂರು: ಆಂಧ್ರಪ್ರದೇಶದಿಂದ ನಗರಕ್ಕೆ ಕ್ವಿಂಟಲ್‌ಗೂ ಅಧಿಕ ಗಾಂಜಾ ತಂದು ಮಾರಾಟ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಹತ್ತು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ನಗರದ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಸೀಲಮ್ ನಾಗವೆಂಕಟ ಸಾಯಿಚರಣ್ (29) ಮತ್ತು ವಿಜಯವಾಡ ಮೂಲದ ಜಗನ್ನಾಥನ್ ವಿಕಾಸ್ ಮಿಶ್ರಾ (30) ಶಿಕ್ಷೆಗೆ ಗುರಿಯಾದವರು.
ಸುದ್ದಗುಂಟೆ ಪಾಳ್ಯದ ಕೆಇಬಿ ಪಾರ್ಕ್ ಸಮೀಪ 2021ರ ಏಪ್ರಿಲ್ 12ರಂದು ಕಾರಿನಲ್ಲಿ ಗಾಂಜಾ ಸಾಗಣೆಯ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ, ಕಾರು ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸಿದ್ದರು. ಕಾರು ಪರಿಶೀಲನೆ ವೇಳೆ 114 ಕೆ.ಜಿ. ಗಾಂಜಾ ಪತ್ತೆಯಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಡಿ.ಎನ್.ನಟರಾಜ್ ನೇತೃತ್ವದ ತಂಡ, ಆರೋಪಿಗಳ ವಿರುದ್ಧ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ತಡೆ ಕಾಯ್ದೆ (ಎನ್‌ಡಿಪಿಎಸ್) ಅನ್ವಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ನ್ಯಾಯಾಧೀಶರಾದ ಲತಾ ಅವರು ಪ್ರಾಸಿಕ್ಯೂಷನ್ ವಾದ ಮತ್ತು ಸಾಕ್ಷ್ಯಾಧಾರಗಳನ್ನು ಪುರಸ್ಕರಿಸಿ ಅಪರಾಧಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ.
‘ಆರೋಪಿಗಳು ನಗರಕ್ಕೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಕುರಿತು ಪ್ರಾಸಿಕ್ಯೂಷನ್ ಪ್ರಬಲ ಸಾಕ್ಷ್ಯಾಧಾರ ಸಂಗ್ರಹಿಸಿತ್ತು. ಏಳು ಮಂದಿ ಸಾಕ್ಷಿಗಳು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು. ಇದರಿಂದಾಗಿ ಇಬ್ಬರನ್ನೂ ಶಿಕ್ಷೆಗೆ ಗುರಿಪಡಿಸಲು ಸಾಧ್ಯವಾಯಿತು’ ಎಂದು ಸರ್ಕಾರಿ ಅಭಿಯೋಜಕ ಕೆ.ವಿ.ಅಶ್ವತ್ಥನಾರಾಯಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.