ADVERTISEMENT

ಚಿಕ್ಕಬಾಣಾವರ: ಕಸ ವಿಂಗಡಣೆಗೆ ಶಾಸಕ ಎಸ್.ಮುನಿರಾಜು ಮನವಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 15:48 IST
Last Updated 24 ಫೆಬ್ರುವರಿ 2024, 15:48 IST
ಕಸ ಸಂಗ್ರಹಿಸಲು ಹೊಸದಾಗಿ ಖರೀದಿಸಿರುವ 6 ಮಿನಿ ಟಿಪ್ಪರ್ ವಾಹನಗಳಿಗೆ ಶಾಸಕ ಎಸ್. ಮುನಿರಾಜು ಅವರು ಚಿಕ್ಕಬಾಣಾವರ ಪುರಸಭೆ ಬಳಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.
ಕಸ ಸಂಗ್ರಹಿಸಲು ಹೊಸದಾಗಿ ಖರೀದಿಸಿರುವ 6 ಮಿನಿ ಟಿಪ್ಪರ್ ವಾಹನಗಳಿಗೆ ಶಾಸಕ ಎಸ್. ಮುನಿರಾಜು ಅವರು ಚಿಕ್ಕಬಾಣಾವರ ಪುರಸಭೆ ಬಳಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.   

ಪೀಣ್ಯ ದಾಸರಹಳ್ಳಿ: ‘ಈ ಭಾಗದಲ್ಲಿ ಕಸದ ಸಮಸ್ಯೆಯಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಮನೆ ಹತ್ತಿರ ಬರುವ ಟಿಪ್ಪರ್ ವಾಹನಗಳಿಗೆ ಹಸಿ ಮತ್ತು ಒಣ ಕಸ ವಿಂಗಡಿಸಿ, ಹಾಕಿ ಸ್ವಚ್ಛತೆ ಕಾಪಾಡಬೇಕು’ ಎಂದು ಶಾಸಕ ಎಸ್.ಮುನಿರಾಜು ಮನವಿ ಮಾಡಿದರು.

ಚಿಕ್ಕಬಾಣಾವರ ಪುರಸಭೆಯ 6 ಮಿನಿ ಟಿಪ್ಪರ್‌ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಚಿಕ್ಕಬಾಣಾವರ ಮುಖ್ಯ ಅಧಿಕಾರಿ ಎಚ್.ಎ.ಕುಮಾರ್ ಮಾತನಾಡಿ, ‘ಸ್ವಚ್ಛ ಭಾರತ ಅಭಿಯಾನ ಹಾಗೂ ಪುರಸಭೆ ಅನುದಾನದಲ್ಲಿ ಮೊದಲ ಬಾರಿಗೆ 6 ಮಿನಿ ಟಿಪ್ಪರ್ ಖರೀದಿಸಲಾಗಿದೆ. ಮನೆ ಮನೆಗೆ ಹೋಗಿ ಕಸ ಸಂಗ್ರಹಕ್ಕೆ ಟಿಪ್ಪರ್ ಬಳಸಲಾಗುತ್ತದೆ. ಒಂದೂವರೆ ಟನ್ ಕಸ ತುಂಬುಲು ಸಾಧ್ಯತೆಯಿರುವ ಎರಡು ಕಂಪಾರ್ಟ್‌ಮೆಂಟ್‌ ಹೊಂದಿದ್ದು, ಹಸಿ ಮತ್ತು ಒಣಕಸ ಸಂಗ್ರಹಿಸಬಹುದಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ವಿಂಗಡಣೆಯಾದ ಹಸಿ ಕಸವನ್ನು ನಗರಾಭಿವೃದ್ಧಿಯ ಸೂಚನೆಯಂತೆ ದಾಸರಹಳ್ಳಿ ಬಿಬಿಎಂಪಿಗೆ ಕಳುಹಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತೆ 3 ಆಟೊ ಟಿಪ್ಪರ್ ಬರಲಿದ್ದು ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ಒಟ್ಟು 9 ಗಾಡಿಗಳು ಲಭ್ಯವಾದಲ್ಲಿ ಎಲ್ಲಾ ಏರಿಯಾಗಳಲ್ಲಿ ಕಸ ಸಂಗ್ರಹಿಸಲು ಅನುಕೂಲವಾಗಲಿದೆ. ಒಂದು ದಿನಕ್ಕೆ ಕನಿಷ್ಠ 18 ಟನ್ ಕಸ ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುತ್ತದೆ. ಅದರಲ್ಲಿ 10 ಟನ್ ಕಸ ಮಾತ್ರ ವಿಲೇವಾರಿಯಾಗುತ್ತಿದೆ’ ಎಂದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಪರಿಸರ ಎಂಜಿನಿಯರ್‌ ಹರೀಶ್, ಬಿಜೆಪಿ ಮುಖಂಡರಾದ ಬಿ.ಎಂ.ಚಿಕ್ಕಣ್ಣ, ನವೀನ್, ಕಬೀರ್ ಅಹ್ಮದ್ ಪಾಲ್ಗೊಂಡಿದ್ದರು.

ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯಲ್ಲಿ ಕಸದ ರಾಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.