ADVERTISEMENT

ಅನಿಲ ಸೋರಿಕೆ: ಸ್ಫೋಟದಿಂದ ಜಖಂ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 19:56 IST
Last Updated 3 ಮಾರ್ಚ್ 2019, 19:56 IST
ಸ್ಫೋಟದಿಂದಾಗಿ ಕುಸಿದು ಬಿದ್ದಿರುವ ಗೋಡೆ
ಸ್ಫೋಟದಿಂದಾಗಿ ಕುಸಿದು ಬಿದ್ದಿರುವ ಗೋಡೆ   

ಬೆಂಗಳೂರು: ಪರಪ್ಪನ ಅಗ್ರಹಾರ ಬಳಿಯ ನಾಗನಾಥಪುರದ ಮುನೇಶ್ವರ ಬ್ಲಾಕ್‌ನಲ್ಲಿ ಗೇಲ್ ಕಂಪನಿಯ ಅನಿಲ ಸೋರಿಕೆಯಿಂದ ಸಂಭವಿಸಿದ್ದ ಸ್ಫೋಟದಿಂದಾಗಿ ಮನೆಗಳು ಜಖಂಗೊಂಡಿದ್ದು, ನಿವಾಸಿಗಳು ಬೀದಿ ಪಾಲಾ
ಗಿದ್ದಾರೆ.

ಫೆ. 26ರಂದು ರಾತ್ರಿ ಸಂಭವಿಸಿದ್ದ ಸ್ಫೋಟದಿಂದಾಗಿ ಸ್ಥಳೀಯ ನಿವಾಸಿಗಳಾದ ಡಿ.ಶ್ರೀನಿವಾಸಲು, ನೀಲಾನಾಥ್ ಹಾಗೂ ದಂಡಪಾಣಿ ಎಂಬುವರ ಮನೆಗಳಿಗೆ ಹೆಚ್ಚು ಹಾನಿ ಉಂಟಾಗಿದೆ. ಆ ಮೂರು ಮನೆಗಳ ಅಕ್ಕ–ಪಕ್ಕದ ಮನೆಗಳ ಕಿಟಕಿ ಹಾಗೂ ಬಾಗಿಲುಗಳು ಮುರಿದಿವೆ.

'ನಾಗನಾಥಪುರದಲ್ಲಿ ನೆಲದಡಿಯಲ್ಲಿ ಗೇಲ್ ಕಂಪನಿ ವತಿಯಿಂದ ಗ್ಯಾಸ್ ಪೈಪ್ ಅಳವಡಿಸಲಾಗಿದೆ. ಅದರ ಮೂಲಕವೇ ಮನೆ ಮನೆಗಳಿಗೆ ಸಂಪರ್ಕ ನೀಡಲಾಗಿದೆ. ಮುನೇಶ್ವರ ಬ್ಲಾಕ್‌ನಲ್ಲಿ ವಿದ್ಯುತ್ ತಂತಿ ಅಳವಡಿಸುವುದಕ್ಕಾಗಿಬೆಸ್ಕಾಂ ಗುತ್ತಿಗೆದಾರರು, ನೆಲ ಅಗೆಯುತ್ತಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪೈಪ್ ಒಡೆದು ಅನಿಲ ಸೋರಿಕೆಯಾಗಿ ಮನೆಯಲ್ಲೆಲ್ಲ ಆವರಿಸಿತ್ತು. ನಂತರವೇ ಸ್ಫೋಟ ಸಂಭವಿಸಿತ್ತು' ಎಂದು ನಿವಾಸಿಶ್ರೀನಿವಾಸಲು ‘ಪ್ರಜಾವಾಣಿ’ಗೆ ತಿಳಿಸಿದರು. ‘ನಮ್ಮ ಮನೆಯ ಚಾವಣಿ, ಹಿಂಭಾಗ ಹಾಗೂ ಮುಂಭಾಗದ ಗೋಡೆ ಕುಸಿದು ಬಿದ್ದಿದೆ. ಇದರಿಂದಾಗಿ ಮನೆಯ ರೂಪವೇ ಬದಲಾಗಿದ್ದು, ಬಯಲಿನಂತೆ ಕಾಣುತ್ತಿದೆ. ಕುಟುಂಬದವರೆಲ್ಲ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುವಂತಾಗಿದೆ’ ಎಂದರು.

ADVERTISEMENT

‘ಮನೆಗಳಷ್ಟೆ ಅಲ್ಲದೇ ಬೈಕ್ ಹಾಗೂ ಎರಡು ಕಾರುಗಳು ಜಖಂಗೊಂಡಿವೆ. ಈ ಅವಘಡದಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಬೆಸ್ಕಾಂ ಸಂಸ್ಥೆಯಿಂದ ನೆಲದಡಿಯಲ್ಲಿ ತಂತಿ ಅಳವಡಿಸುವ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ. ಆ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಲಾಗಿದೆ’ ಎಂದು ಅವರು ತಿಳಿಸಿದರು.

ಕಿಮ್ಸ್‌ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ: ಅವಘಡದಲ್ಲಿ ಕುಮಾರಿ ಗಗನಾ (11) ಹಾಗೂ ರೋಹನ್ (12) ಎಂಬುವವರು ಗಾಯಗೊಂಡಿದ್ದರು. ಆ ಪೈಕಿ ರೋಹನ್‌ಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ತೀವ್ರ ಗಾಯಗೊಂಡಿರುವ ಬಾಲಕಿ ಗಗ
ನಾಳಿಗೆ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.