ADVERTISEMENT

ಅಡುಗೆ ಅನಿಲ ಸೋರಿಕೆ: ಮಹಿಳೆ ಸಾವು

ಗ್ಯಾಸ್ ಸ್ಟೌ ಹಚ್ಚಿದ್ದಾಗ ಅಡುಗೆ ಕೊಠಡಿಯಲ್ಲಿ ಅನಿಲ ಸೋರಿಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 2:43 IST
Last Updated 21 ನವೆಂಬರ್ 2019, 2:43 IST
ಗ್ಯಾಸ್ ಸಿಲಿಂಡರ್ ಸಾಂದರ್ಭಿಕ ಚಿತ್ರ
ಗ್ಯಾಸ್ ಸಿಲಿಂಡರ್ ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿ ಉರಿದ ಪರಿಣಾಮ ಮಹಿಳೆ ಮೃತಪಟ್ಟು ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಚಂದ್ರಲೇಔಟ್ ಠಾಣಾ ವ್ಯಾಪ್ತಿಯ ಮಾರುತಿ ನಗರದಲ್ಲಿ ಮಂಗಳವಾರ ಸಂಜೆ ನಡೆದಿದೆ.

ನಾಗರಬಾವಿಯ ಮಾರುತಿನಗರದ ಚಿತ್ರಾವತಿ (52) ಮೃತ ಮಹಿಳೆ. ಅವರ ತಾಯಿ ಸತ್ಯಪ್ರೇಮ (75) ಮತ್ತು ಸಹೋದರ ಗುರುಮೂರ್ತಿ ಅವರ ಸ್ಥಿತಿ ಗಂಭೀರವಾಗಿದ್ದು, ತಂದೆ ಲಕ್ಷ್ಮೀನಾರಾಯಣ ರಾವ್ (88) ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.

‘ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ಅನಿಲ ಸೋರಿಕೆ ಆಗಿರುವುದನ್ನು ಗಮನಿಸದೆ ಸ್ಟೌ ಹಚ್ಚಿದ ಪರಿಣಾಮ ಈ ದುರಂತ ಸಂಭವಿಸಿದೆ’ ಎಂದು ಚಂದ್ರಲೇಔಟ್ ಠಾಣೆಯ ಪೊಲೀಸರು ತಿಳಿಸಿದರು.

ADVERTISEMENT

ಪತಿ ಮತ್ತು ಮಕ್ಕಳ ಜತೆ ಚಿತ್ರಾವತಿ‌ ಯಶವಂತಪುರದಲ್ಲಿ ನೆಲೆಸಿದ್ದರು. ತಾಯಿ ಸತ್ಯಪ್ರೇಮ, ತಂದೆ ಲಕ್ಷ್ಮೀನಾರಾಯಣ ರಾವ್ ಮತ್ತು ಸಹೋದರ ಗುರುಮೂರ್ತಿ ಜೊತೆ ಮಾರುತಿನಗರದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಅವಿವಾಹಿತರಾಗಿರುವ ಗುರುಮೂರ್ತಿ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ.

ಪೋಷಕರನ್ನು ನೋಡಿಕೊಂಡು ಹೋಗಲು ಮಂಗಳವಾರ ಮಧ್ಯಾಹ್ನ ಮೂರು ಗಂಟೆಗೆ ಚಿತ್ರಾವತಿ ಅವರು ತಾಯಿ ಮನೆಗೆ ಬಂದಿದ್ದರು. ಈ ವೇಳೆ, ಸತ್ಯಪ್ರೇಮ ಅವರು ಅಡುಗೆ ಮನೆಯಲ್ಲಿ ಕಾಫಿ ಮಾಡಲು ಗ್ಯಾಸ್ ಸ್ಟೌ ಹಚ್ಚಿದ್ದಾರೆ. ಅನಿಲ ಸೋರಿಕೆಯಾಗಿದ್ದ ಪರಿಣಾಮ, ಕೆಲವೇ ಕ್ಷಣಗಳಲ್ಲಿ ಇಡೀ ಅಡುಗೆ ಮನೆಯಲ್ಲಿ ಬೆಂಕಿ ಅವರಿಸಿಕೊಂಡಿದೆ. ಸತ್ಯಪ್ರೇಮ ಅವರಿಗೂ ಬೆಂಕಿ ತಗುಲಿದೆ. ಕೂಡಲೇ ನೆರವಿಗೆ ತಾಯಿ ಚಿತ್ರಾವತಿ ಧಾವಿಸಿದ್ದು, ಅವರಿಗೂ ಬೆಂಕಿ ತಗುಲಿದೆ.

ಮನೆಯ ಹಾಲ್‌ನಲ್ಲಿ ಟಿ.ವಿ. ವೀಕ್ಷಿಸುತ್ತಿದ್ದ ಗುರುಮೂರ್ತಿ, ಅಡುಗೆ ಮನೆಗೆ ತೆರಳಿ ತಾಯಿ ಮತ್ತು ಸಹೋದರಿಗೆ ತಗುಲಿದ್ದ ಬೆಂಕಿ ಆರಿಸಿದ್ದಾರೆ. ಈ ವೇಳೆ, ಗುರುಮೂರ್ತಿ ಅವರ ಮುಖ, ಕೈ ಮತ್ತು ಎದೆಭಾಗಕ್ಕೆ ಬೆಂಕಿ ತಗುಲಿದ್ದು, ಸುಟ್ಟ ಗಾಯಗಳಾಗಿವೆ. ವೃದ್ಧ ತಂದೆ ಲಕ್ಷ್ಮೀನಾರಾಯಣ ಏನಾಗಿದೆ ಎಂದು ಅಡುಗೆ ಕೋಣೆಯತ್ತ ತೆರಳಿದ್ದು, ಅವರ ಮುಖವೂ ಸುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.