ADVERTISEMENT

‘ಸಲಿಂಗಕಾಮಿ ಆ್ಯಪ್’ ವಂಚನೆ; ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 6:40 IST
Last Updated 5 ಅಕ್ಟೋಬರ್ 2019, 6:40 IST
   

ಬೆಂಗಳೂರು: ’ಸಲಿಂಗಕಾಮಿ ಆ್ಯಪ್’ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ಅವರ ಮನೆಗೆ ಹೋಗಿ ಸುಲಿಗೆ ಮಾಡುತ್ತಿದ್ದ ಆರೋಪದಡಿ ಸಂದೀಪ್ ಜಾದವ್ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಕಲಬುರ್ಗಿಯ ಸಂದೀಪ್, ಹೈದರಾಬಾದ್‌ನಲ್ಲಿರುವ ಎಲೆಕ್ಟ್ರಾನಿಕ್ ವಸ್ತುಗಳ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ. ಆಗಾಗ ನಗರಕ್ಕೆ ಬಂದು ಕೃತ್ಯ ಎಸಗಿ ಪರಾರಿಯಾಗುತ್ತಿದ್ದ’ ಎಂದು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಹೇಳಿದರು.

‘ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವಕನೊಬ್ಬ ಸಲಿಂಗಕಾಮಿ ಆ್ಯಪ್‌ನಲ್ಲಿ ಖಾತೆ ತೆರೆದು ಸಂಗಾತಿಗಾಗಿ ಹುಡುಕಾಟ ನಡೆಸುತ್ತಿದ್ದ. ಅಲ್ಲಿಯೇ ಯುವಕನನ್ನು ಆರೋಪಿ ಪರಿಚಯಿಸಿಕೊಂಡಿದ್ದ. ಇಬ್ಬರೂ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಚಾಟಿಂಗ್ ಮಾಡಲಾರಂಭಿಸಿದ್ದರು.’

ADVERTISEMENT

‘ಮಾರ್ಚ್‌ನಲ್ಲಿ ನಗರಕ್ಕೆ ಬಂದಿದ್ದ ಆರೋಪಿಯನ್ನು ದೂರುದಾರ ಯುವಕನೇ ತನ್ನ ಮನೆಗೆ ಕರೆದೊಯ್ದಿದ್ದ. ಅಲ್ಲಿಯೇ ಯುವಕನನ್ನು ಬೆದರಿಸಿ ಆತನ ಎಟಿಎಂ ಕಾರ್ಡ್‌ ಪಡೆದು ₹1.35 ಲಕ್ಷ ಡ್ರಾ ಮಾಡಿಕೊಂಡು ಆರೋಪಿ ಪರಾರಿಯಾಗಿದ್ದ’ ಎಂದರು.

‘ಬಂಡೆಪಾಳ್ಯ, ಬೊಮ್ಮನಹಳ್ಳಿ ಸೇರಿ ಹಲವು ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.