
ಬೆಂಗಳೂರು: ‘ಯಾರೂ ಪ್ರವೇಶಿಸದ ದಾರಿಗಳನ್ನು ಆಯ್ಕೆ ಮಾಡಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಜಿ.ಬಿ. ಹರೀಶ ದೃಢ ಹೆಜ್ಜೆ ಇಟ್ಟಿದ್ದಾರೆ. ಬರವಣಿಗೆಯಲ್ಲಿ ಇನ್ನಷ್ಟು ಪಕ್ವತೆ ಬೆಳೆಸಿಕೊಳ್ಳಬೇಕು’ ಎಂದು ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು
ಜಿ.ಬಿ. ಹರೀಶ ಸ್ವರ್ಣಪೂರ್ಣ ಸಮಾರಂಭದಲ್ಲಿ ವಿದಗ್ಧ ಕೃತಿಯನ್ನು ಗುರುವಾರ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ಲೇಖಕನಿಗೆ ಸಮಗ್ರ ಓದಿನ ಹಿನ್ನೆಲೆ ಇರಬೇಕು. ವಿಚಾರ ಸ್ಪಷ್ಟತೆಯನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಲೇಖಕನಾದವನು ವರ್ತಮಾನಕ್ಕೆ ಅರ್ಪಿಸಿಕೊಳ್ಳುತ್ತಾ ಭವಿಷ್ಯದ ದರ್ಶನವನ್ನು ಬರಹದ ಮೂಲಕ ಮಾಡಿಸಬೇಕು. ತಂತ್ರಶಾಸ್ತ್ರ, ದರ್ಶನದಂತಹ ವಿಷಯಗಳ ಪ್ರವೇಶ ಮಾಡಿ ದೃಢ ಹೆಜ್ಜೆಗಳೊಂದಿಗೆ ಎಲ್ಲಾ ಆಯಾಮದಲ್ಲೂ ವಿಚಾರ ಮಾಡುವುದು ಸುಲಭವಲ್ಲ. ಹರೀಶ್ ಅವರು ಇಂತಹ ಬೌದ್ದಿಕ ಸಾಮರ್ಥ್ಯವನ್ನು ಸಣ್ಣ ವಯಸ್ಸಿಗೆ ಸಾಬೀತುಪಡಿಸಿದ್ದಾರೆ’ ಎಂದು ಹೇಳಿದರು.
ವೆಬ್‌ಸೈಟ್ ಜನಾರ್ಪಣೆ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಭಾಷೆ, ಸಾಹಿತ್ಯ ಸಂಚಾಲಕ ಬಸವರಾಜ ಕಲ್ಗುಡಿ ಮಾತನಾಡಿ, ‘ಭಾರತವೆಂಬ ಸಂಸ್ಕೃತಿಯ ಬಳ್ಳಿಯಲ್ಲಿ ಹಲವು ರೀತಿಯ ಹೂವುಗಳಿವೆ. ಸಂಸ್ಕೃತಿಯನ್ನು ಒಂದು ನೆಲೆಯಲ್ಲಿ ನೋಡುವುದು ಅಪಾಯಕರ. ರಾಷ್ಟ್ರೀಯತೆಯ ನೆಲೆಯಲ್ಲಿಯೇ ಹರೀಶ ಅವರು ತಮ್ಮ ಬರವಣಿಗೆ ಹಾದಿ ರೂಪಿಸಿಕೊಂಡಿದ್ದರೂ ಅದರಲ್ಲಿ ಭಿನ್ನತೆಯನ್ನೂ ತೋರಿದ್ದಾರೆ’ ಎಂದರು.
‘ಬರವಣಿಗೆ ಜತೆಗೆ ಅಧ್ಯಯನ, ಪ್ರಯೋಗಶೀಲತೆ, ಸಂಶೋಧನೆಯ ಮಾರ್ಗಗಳು ಲೇಖಕನನ್ನು ರೂಪಿಸುತ್ತವೆ. ನಾಥ, ಸಿದ್ದ, ಗೋರಕನಾಥ ಪರಂಪರೆಗಳ ಕುರಿತು ಹರೀಶ್ ಅವರು ಕೈಗೊಂಡ ಸಂಶೋಧನೆ ಮಹತ್ವವಾದದ್ದು’ ಎಂದು ಹೇಳಿದರು.
ಜಿ.ಬಿ.ಹರೀಶ ಅವರ ಸಾಹಿತ್ಯ ಕುರಿತು ದಾವಣಗೆರೆ ಸಿದ್ದಗಂಗಾ ಪಿಯು ಕಾಲೇಜು ಇಂಗ್ಲಿಷ್ ಉಪನ್ಯಾಸಕ ಆರ್.ಎಸ್.ಗಣೇಶ್ ಪ್ರಸಾದ್, ಸಂಶೋಧನೆ ಹಾಗೂ ದರ್ಶನಗಳು ಕುರಿತು ಪುರಾತತ್ವ ಸಂಶೋಧಕ ಎಸ್.ಕಾರ್ತಿಕ್, ವೈಚಾರಿಕ ಸಾಹಿತ್ಯ ಮತ್ತು ಉಪನ್ಯಾಸ ಕುರಿತು ಲೇಖಕ ಹರ್ಷ ಸಮೃದ್ದ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.