ADVERTISEMENT

ಬಿಬಿಎಂಪಿ ಆಚೆಗೂ ಜಿಬಿಎ: ತಿದ್ದುಪಡಿ ಮಸೂದೆ

ಸಂಸ್ಥೆಗಳ ಮರುವಿಂಗಡಣೆಗೆ 3 ತಿಂಗಳು ಗಡುವು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 19:51 IST
Last Updated 11 ಡಿಸೆಂಬರ್ 2025, 19:51 IST
<div class="paragraphs"><p>ಜಿಬಿಎ</p></div>

ಜಿಬಿಎ

   

ಬೆಳಗಾವಿ (ಸುವರ್ಣ ವಿಧಾನಸೌಧ): ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯನ್ನು ಹಿಂದಿನ ಬಿಬಿಎಂಪಿ ವ್ಯಾಪ್ತಿಯ ಆಚೆಗೆ ವಿಸ್ತರಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ‘ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ಮಸೂದೆ–2025’ ಅನ್ನು ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಯಿತು.

ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ
ಡಿ.ಕೆ. ಶಿವಕುಮಾರ್‌ ಅವರ ಪರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಮಸೂದೆ ಮಂಡಿಸಿದರು.

ADVERTISEMENT

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಹೊಸದಾಗಿ ಸೇರಿಸಲಾದ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಪ್ರದೇಶಗಳ ಮರು ವಿಂಗಡಣೆಗೆ ಮೂರು ತಿಂಗಳ ಕಾಲಮಿತಿ ವಿಧಿಸಲಾಗಿದೆ. ಜೊತೆಗೆ, ನಗರಪಾಲಿಕೆಯ ಮುಂದಿನ ಸಾರ್ವತ್ರಿಕ ಚುನಾವಣೆಯ ಕನಿಷ್ಠ ಆರು ತಿಂಗಳ ಮೊದಲು ಜನಗಣತಿಯ ಫಲಿತಾಂಶಗಳು ಲಭ್ಯ ಇದ್ದರೆ ಮತ್ತು ಪ್ರತಿ ಜನಗಣತಿಯ ಬಳಿಕ ನಗರಪಾಲಿಕೆಯ ಮುಂದಿನ ಸಾರ್ವತ್ರಿಕ ಚುನಾವಣೆಯ ಮೊದಲು ಹೊಸ ಪುನರ್‌ವಿಂಗಡಣೆ ಪ್ರಕ್ರಿಯೆ ನಡೆಸಬೇಕು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಗ್ರೇಟರ್ ಬೆಂಗಳೂರು ನಗರಪಾಲಿಕೆ ಗಳಿಗೆ ನೇಮಕವಾದ ಸದಸ್ಯ ಪದಾವಧಿ ಯವರೆಗೆ ಆಯಾ ವಿಧಾನಸಭೆ ಕ್ಷೇತ್ರ ಮಟ್ಟದ ಸಮಾಲೋಚನಾ ಮತ್ತು ಸಮನ್ವಯ ಸಮಿತಿಗೆ ನಾಮನಿರ್ದೇಶಿತ ಸದಸ್ಯ ಕೂಡ ಆಗಿರುತ್ತಾರೆ ಎಂದೂ ಮಸೂದೆಯಲ್ಲಿದೆ.

ಜಿಬಿಎ ಸದಸ್ಯರ ಸಂಖ್ಯೆ ಹೆಚ್ಚಳ: ಜಿಬಿಎ ಪ್ರದೇಶ ಅಥವಾ ಭಾಗಶಃ ಮತಕ್ಷೇತ್ರ ಬರುವ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರು, ರಾಜ್ಯಸಭೆ, ವಿಧಾನ ಪರಿಷತ್‌ಗೆ ನೇಮಕವಾದ ಸದಸ್ಯರು, ವಿಧಾನ ಪರಿಷತ್ ಶಿಕ್ಷಕರ, ಪದವೀಧರ ಕ್ಷೇತ್ರದಿಂದ ಚುನಾಯಿತರು, ಜಿಬಿಎ ಪ್ರದೇಶದ ಮತದಾರರ ಪಟ್ಟಿಯಲ್ಲಿ ಇರುವ ರಾಜ್ಯಸಭಾ, ವಿಧಾನ ಪರಿಷತ್ ಸದಸ್ಯರು ಪ್ರಾಧಿಕಾರದ ಸದಸ್ಯರಾಗಲಿದ್ದಾರೆ. ಅಲ್ಲದೆ, ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಹಾಗೂ ಆರ್ಥಿಕ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಜಿಬಿಎ ಪದನಿಮಿತ್ತ ಸದಸ್ಯರಾಗಲಿದ್ದಾರೆ ಎಂದೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.