ಬೆಂಗಳೂರು: ‘ಐದು ನಗರ ಪಾಲಿಕೆಗಳು ಕಾರ್ಯಾರಂಭ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಒಂದು ಸಂಸ್ಥೆ ಸ್ಥಗಿತಗೊಂಡ ಮರುದಿನವೇ ಮತ್ತೊಂದು ಸಂಸ್ಥೆ ಕಾರ್ಯಾರಂಭ ಮಾಡುವುದು ಕಷ್ಟ, ಒಂದಷ್ಟು ದಿನ ಬೇಕಾಗುತ್ತದೆ’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ಜಿಬಿಎ ಮುಖ್ಯ ಆಯುಕ್ತರಾಗಿ ಅಧಿಕೃತವಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ವರ್ ರಾವ್, ‘ಎಲ್ಲ ನಗರ ಪಾಲಿಕೆಗಳ ಗಡಿಗಳಲ್ಲಿ ನಾಮಫಲಕವನ್ನು ಹಾಕಲಾಗುತ್ತದೆ. ಎಲ್ಲೆಲ್ಲಿ ನಾಮಫಲಕ, ರಸ್ತೆ ಫಲಕಗಳಿವೆಯೋ ಅಲ್ಲಿ ನಗರ ಪಾಲಿಕೆಗಳ ಹೆಸರು ನಮೂದಿಸಲಾಗುತ್ತದೆ. ಕ್ಯೂಆರ್ ಕೋಡ್ ಅನ್ನೂ ಹಾಕಿ ನಗರ ಪಾಲಿಕೆ, ಸಿಬ್ಬಂದಿಯ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗುತ್ತದೆ’ ಎಂದರು.
‘ನಮ್ಮ ಪ್ರಥಮ ಆದ್ಯತೆ ವಾರ್ಡ್‌ಗಳ ಪುನರ್ ವಿಂಗಡಣೆ, ಅದನ್ನು ಗುರುವಾರದಿಂದ ಆರಂಭಿಸಲಾಗುತ್ತದೆ. ಚುನಾವಣೆಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕಾಗಿದೆ’ ಎಂದು ವಾರ್ಡ್ ಪುನರ್ ವಿಂಗಡಣೆ ಆಯೋಗದ ಆಧ್ಯಕ್ಷರೂ ಆದ ಮಹೇಶ್ವರ್ ರಾವ್ ತಿಳಿಸಿದರು.
‘ನಗರ ಪಾಲಿಕೆಗಳಲ್ಲಿ ಐವರು ಆಯುಕ್ತರು ಬಂದಿದ್ದಾರೆ. ಅವರು ವೇಗವಾಗಿ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ನಗರ ಪಾಲಿಕೆಗಳು ಪೂರಕ ಬಜೆಟ್ ಅನ್ನು ಸಲ್ಲಿಸಬಹುದಾಗಿದೆ. ನೀರು ನಿಲ್ಲುವ ಕಡೆಯಲ್ಲಿ ರಸ್ತೆ ಗುಂಡಿಗಳನ್ನು ದುರಸ್ತಿ ಮಾಡಿದರೂ ಕಿತ್ತುಹೋಗುತ್ತದೆ. ನೀರು ನಿಲ್ಲದಂತೆ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಗುಣಮಟ್ಟವನ್ನು ಅಳೆಯಲಾಗುವುದಿಲ್ಲ’ ಎಂದು ಐದೂ ನಗರ ಪಾಲಿಕೆಗಳ ಆಡಳಿತಾಧಿಕಾರಿಯಾದ ಮಹೇಶ್ವರ್ ಮಾಹಿತಿ ನೀಡಿದರು.
‘ಬನ್ನೇರುಘಟ್ಟ ರಸ್ತೆ, ಸಿಲ್ಕ್ ಬೋರ್ಡ್ ರಸ್ತೆಗಳಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಪದೇ ಪದೇ ಬರುತ್ತದೆ. ಜಲಮಂಡಳಿಯವರು ನೀರಿನ ಕೊಳವೆ ಮಾರ್ಗವನ್ನು ಅಳವಡಿಸುತ್ತಿದ್ದಾರೆ. ಕೂಡಲೇ ಅದನ್ನು ಮುಚ್ಚಿದರೆ ಹಳ್ಳವಾಗುತ್ತದೆ. ಹೀಗಾಗಿ, ಶಾಶ್ವತ ಪರಿಹಾರ ತಡವಾಗುತ್ತಿದೆ’ ಎಂದರು.
‘500 ಕಿ.ಮೀ ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಮಾಡಲಾಗಿದೆ. ಇನ್ನೂ 500 ಕಿ.ಮೀ ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಮಾಡಿದರೆ ರಸ್ತೆ ಗುಂಡಿ ನಿಯಂತ್ರಣವಾಗುತ್ತದೆ. ಎಲ್ಲೆಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತವೆಯೋ ಅಲ್ಲಿ ಹೈಡೆನ್ಸಿಟಿ ಕಾರಿಡಾರ್ ನಿರ್ಮಿಸಲಾಗುತ್ತದೆ. ಆಗ ಶಾಶ್ವತ ಪರಿಹಾರ ಸಿಗುತ್ತದೆ. ಅಲ್ಲಿಯವರೆಗೆ ತಾತ್ಕಾಲಿಕ ಪರಿಹಾರ ನೀಡಲಾಗುತ್ತದೆ. ಜನರು ಸ್ವಲ್ಪ ತಾಳ್ಮೆ ವಹಿಸಬೇಕು’ ಎಂದರು.
‘ತಾತ್ಕಾಲಿಕ ‘ವ್ಯಾಲಿ ಬ್ರಿಡ್ಜ್’ಗೆ ಚಿಂತನೆ’
‘ಅತಿಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಬ್ಲ್ಯಾಕ್ ಟಾಪಿಂಗ್ ಕಾಮಗಾರಿ ಮಾಡುವುದು ಸಮಸ್ಯೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ‘ವ್ಯಾಲಿ ಬ್ರಿಡ್ಜ್’ಗಳನ್ನು ತಾತ್ಕಾಲಿಕವಾಗಿ ಅಳವಡಿಸಲು ಚಿಂತಿಸಲಾಗುತ್ತಿದೆ’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
‘ಕೊಲ್ಕತ್ತದ ಕಂಪನಿಯೊಂದು ವ್ಯಾಲಿ ಬ್ರಿಡ್ಜ್ ಬಗ್ಗೆ ವಿವರ ನೀಡಿದ್ದು ನಗರ ಪ್ರದೇಶಗಳಲ್ಲಿ ಸುಗಮವಾಗಿ ಕಾಮಗಾರಿಗಳನ್ನು ನಡೆಸಲು ಇದು ಸಹಾಯಕವಾಗಲಿದೆ. ತಾತ್ಕಾಲಿಕವಾಗಿ ಸೇತುವೆಯನ್ನು ನಿರ್ಮಿಸಿ ಕೆಳಗೆ ರಸ್ತೆ ಕಾಮಗಾರಿಗಳನ್ನು ನಡೆಸಬಹುದು. 20 ಮೀಟರ್‌ನಿಂದ 30 ಮೀಟರ್ ಸೇತುವೆ ಮಾಡಿದರೆ ಅನುಕೂಲ ಆಗುತ್ತದೆ ಎಂದು ಹೇಳಲಾಗಿದೆ. ಇದು ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆ ಎಂಬುದನ್ನು ಪರಿಶೀಲಿಸಲಾಗುವುದು. ಇದಕ್ಕೆ ಸುಮಾರು ₹4 ಕೋಟಿಯಿಂದ ₹5 ಕೋಟಿ ವೆಚ್ಚವಾಗುತ್ತದೆ ಎನ್ನಲಾಗಿದೆ’ ಎಂದು ಮಾಹಿತಿ ನೀಡಿದರು.
‘ಈ ಸೇತುವೆಯನ್ನು ಅಳವಡಿಸಲು ಸುಮಾರು ಒಂದು ವಾರ ಸಮಯ ಬೇಕು. ಆ ಸಮಯದಲ್ಲಿ ಜನರಿಗೆ ತೊಂದರೆಯಾಗುತ್ತದೆ. ಇದೆಲ್ಲವನ್ನೂ ಪರಿಶೀಲಿಸಬೇಕಾಗಿದೆ. ಸಾಧಕ–ಬಾಧಕಗಳನ್ನು ನೋಡಿಕೊಂಡು ನಗರ ಪಾಲಿಕೆಗಳಲ್ಲೂ ಅಳವಡಿಸಲು ಚಿಂತಿಸಲಾಗಿದೆ. ಸ್ಥಳೀಯ ಸ್ಟಾರ್ಟ್ ಅಪ್‌ಗಳು ವಾಹನ ಸಂಚಾರಕ್ಕೆ ಧಕ್ಕೆಯಾಗದಂತೆ ಕಾಮಗಾರಿ ಸುಗಮವಾಗಿ ನಡೆಯಲು ಯಾವುದಾದರೂ ಪರಿಹಾರಗಳನ್ನು ಹೊಂದಿದ್ದರೆ ಜಿಬಿಎಯೊಂದಿಗೆ ಹಂಚಿಕೊಳ್ಳಬಹುದು’ ಎಂದರು. ‘ನಗರ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿ ನಡೆಯುವಾಗ ಜನರಿಗೆ ತೊಂದರೆ ಆಗುತ್ತದೆ. ಅದನ್ನು ಕಡಿಮೆ ಮಾಡಲು ದೀರ್ಘಕಾಲದ ಪರಿಹಾರಗಳ ಬಗ್ಗೆ ಚಿಂತಿಸಲಾಗುತ್ತಿದೆ’ ಎಂದು ತಿಳಿಸಿದರು.
ಆಯುಕ್ತರ ಅಧಿಕಾರ ಸ್ವೀಕಾರ
ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾಗಿ ಡಿ.ಎಸ್. ರಮೇಶ್ ಪಶ್ಚಿಮ ನಗರ ಪಾಲಿಕೆ ಆಯುಕ್ತರಾಗಿ ಕೆ.ವಿ. ರಾಜೇಂದ್ರ ಉತ್ತರ ನಗರ ಪಾಲಿಕೆ ಆಯುಕ್ತರಗಾಗಿ ಪೊಮ್ಮುಲ ಸುನೀಲ್‌ಕುಮಾರ್ ದಕ್ಷಿಣ ನಗರ ಪಾಲಿಕೆ ಆಯುಕ್ತರಾಗಿ ಕೆ.ಎನ್. ರಮೇಶ್ ಕೇಂದ್ರ ನಗರ ಪಾಲಿಕೆ ಆಯುಕ್ತರಾಗಿ ಪಿ. ರಾಜೇಂದ್ರ ಚೋಳನ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಐದು ನಗರ ಪಾಲಿಕೆಗಳಲ್ಲಿ ಶೇ 60ರಷ್ಟು ಸಿಬ್ಬಂದಿ ಹಾಜರಾಗಿದ್ದು ಉಳಿದವರು ಅಧಿಕಾರ ಸ್ವೀಕರಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.