ADVERTISEMENT

ಜಿಬಿಎ ಸಭೆ: ನಾಲ್ಕೇ ತಿಂಗಳಲ್ಲಿ ಕಾಯ್ದೆ ಉಲ್ಲಂಘನೆ

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮೂರು ತಿಂಗಳೊಳಗೆ ನಡೆಯದೆ ಎರಡನೇ ಜಿಬಿಎ ಸಭೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 0:08 IST
Last Updated 11 ಜನವರಿ 2026, 0:08 IST
ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕಟ್ಟಡ
ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕಟ್ಟಡ   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾಗಿ ನಾಲ್ಕೇ ತಿಂಗಳಿಗೆ ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಜಿಎ) ಉಲ್ಲಂಘನೆಯಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದನ್ನು ಜಿಬಿಎ ಮರೆತುಹೋಗಿದೆ.

ಜಿಬಿಜಿಎಯ ಅಧ್ಯಾಯ–3ರ ಪ್ರಕರಣ 12ರ ಪ್ರಕಾರ, ‘ಜಿಬಿಎ ಅಧ್ಯಕ್ಷರು ಪ್ರತಿ ಮೂರು ತಿಂಗಳಿಗೆ ಕನಿಷ್ಠ ಒಂದು ಬಾರಿ ಜಿಬಿಎ ಸಭೆ ಕರೆಯಬೇಕು’. ಜಿಬಿಎಯ ಮೊದಲ ಸಭೆ 2025ರ ಅಕ್ಟೋಬರ್‌ 10ರಂದು ನಡೆದಿತ್ತು. 2026ರ ಜನವರಿ 10ರೊಳಗೆ ಕನಿಷ್ಠ ಒಂದು ಸಭೆಯನ್ನಾದರೂ ನಡೆಸಬೇಕಿತ್ತು. ಆದರೆ ಈ ಸಭೆ ಬಗ್ಗೆ ಇನ್ನೂ ತಯಾರಿಯೇ ನಡೆದಿಲ್ಲ.

2025ರ ಸೆಪ್ಟೆಂಬರ್‌ 2ರಂದು ರಚನೆಯಾದ ಜಿಬಿಎಯ ಅಧ್ಯಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅ.10ರಂದು ನಡೆದಿದ್ದ ಮೊದಲ ಸಭೆಯಲ್ಲಿ, ಜಿಬಿಎಗೆ ಅಧಿಕಾರಿಗಳ ನೇಮಕ, ಯೋಜನಾ ಪ್ರಾಧಿಕಾರದ ಜವಾಬ್ದಾರಿಯನ್ನು ನೀಡಲಾಗಿತ್ತು. ತದ ನಂತರ ಜಿಬಿಎ ಸಭೆ ನಡೆದಿಲ್ಲ. ಮೂರು ತಿಂಗಳಿಗೆ ಕನಿಷ್ಠ ಒಂದು ಸಭೆ ನಡೆಯಬೇಕೆಂದು ಕಾಯ್ದೆಯಲ್ಲಿದೆ. ಅಂದರೆ, ನಗರ ಅಭಿವೃದ್ಧಿಗಾಗಿ ಒಂದಕ್ಕಿಂತ ಎಷ್ಟಾದರೂ ಸಭೆಯನ್ನು ನಡೆಸಬಹುದು. ಆದರೆ, ನಗರ ಅಭಿವೃದ್ಧಿಯ ಯೋಜನೆಗಳತ್ತ ರಾಜ್ಯದ ಚುಕ್ಕಾಣಿ ಹಿಡಿದಿದವರು ದೃಷ್ಟಿ ಹರಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ADVERTISEMENT

ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ಸೇರಿದಂತೆ ಹಲವು ಅಧಿಕಾರಿಗಳನ್ನು ಜಿಬಿಎ ಸದಸ್ಯರನ್ನಾಗಿ ನೇಮಿಸಿಕೊಳ್ಳಲು ಜಿಬಿಜಿಎಗೆ ತಿದ್ದುಪಡಿಯನ್ನೂ ತರಲಾಗಿದೆ. ಇದರಿಂದ ಜಿಬಿಎ ಸಭೆಯಲ್ಲಿ ನಿರ್ಧಾರವಾಗುವ ವಿಷಯಗಳಿಗೆ ಹೆಚ್ಚಿನ ವೇಗ ಸಿಗುತ್ತದೆ ಎಂಬ ಉದ್ದೇಶವಿದೆ. ಆದರೆ, ಸಭೆಯೇ ನಡೆದೆ ಯಾವ ಉದ್ದೇಶವೂ ಈಡೇರುವಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಜಿಬಿಜಿಎಯಂತೆ ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಜಿಬಿಎ ಉಪಾಧ್ಯಕ್ಷ ಸಭೆಯ ಅಧ್ಯಕ್ಷತೆಯನ್ನು ವಹಿಸಬಹುದು. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪದನಿಮಿತ್ತ ಜಿಬಿಎ ಉಪಾಧ್ಯಕ್ಷರಾಗಿದ್ದಾರೆ. ಅವರ ಅಧ್ಯಕ್ಷತೆಯಲ್ಲಾದರೂ ಸಭೆ ನಡೆಸಬಹುದಿತ್ತು. ಇಲ್ಲದಿದ್ದರೆ, ಅವರಿಬ್ಬರ ಅನುಪಸ್ಥಿತಿಯಲ್ಲಿ ಜಿಬಿಎ ಸಭೆಯಲ್ಲಿ ಹಾಜರಿರುವ ಸದಸ್ಯರು ತಾವೇ ಇತರ ಸದಸ್ಯರೊಬ್ಬರನ್ನು ಆಯ್ಕೆ ಮಾಡಿ ಸಭೆಯ ಅಧ್ಯಕ್ಷರನ್ನಾಗಿ ಮಾಡಿ, ಕಲಾಪಗಳನ್ನು ನಡೆಸಬಹುದು.

ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರೇ ಜಿಬಿಎ ಸಭೆಗೆ ಮುಂದಾಗದಿರುವುದರಿಂದ ಕಾಯ್ದೆ ಉಲ್ಲಂಘನೆಯಾದರೂ ಸಚಿವರು, ಶಾಸಕರೂ ಸಭೆ ನಡೆಸುವ ಬಗ್ಗೆ ಹೆಚ್ಚಿನ ಒಲವು ತೋರಿಲ್ಲ. ‘ಜಿಬಿಎ ಸಭೆ ನಡೆಸುವ ಬಗ್ಗೆ ಉಪ ಮುಖ್ಯಮಂತ್ರಿಯವರೇ ನಿರ್ಧರಿಸಬೇಕು. ಅವರೇ ಅಲ್ಲವೇ ಬೆಂಗಳೂರಿನ ಇನ್‌ಚಾರ್ಜ್‌’ ಎಂದು ನಗರದ ಸಚಿವರೊಬ್ಬರು ಪ್ರತಿಕ್ರಿಯಿಸಿದರು.

ಮಹೇಶ್ವರ್ ರಾವ್
Quote - ಸಭೆ ಮಾಡಬೇಕಿತ್ತು ಮುಖ್ಯಮಂತ್ರಿ– ಉಪ ಮುಖ್ಯಮಂತ್ರಿಯವರ ಸಮಯ ಪಡೆದು ಕೂಡಲೇ ಜಿಬಿಎ ಸಭೆ ನಡೆಸಲಾಗುತ್ತದೆ
ಮಹೇಶ್ವರ್‌ ರಾವ್‌ ಮುಖ್ಯ ಆಯುಕ್ತ ಜಿಬಿಎ

ಸಾರ್ವಜನಿಕರಿಗೆ ಲಭ್ಯವಾಗದ ಮಾಹಿತಿ 2025ರ ಅಕ್ಟೋಬರ್‌ 10ರಂದು ನಡೆದ ಜಿಬಿಎಯ ಮೊದಲ ಸಭೆಯ ತೀರ್ಮಾನ ಹಾಗೂ ಸಂಕ್ಷಿಪ್ತ ಟಿಪ್ಪಣಿ ಸಾರ್ವಜನಿಕವಾಗಿ ಇನ್ನೂ ಲಭ್ಯವಾಗಿಲ್ಲ. ಜಿಬಿಜಿಎ ಅಧ್ಯಾಯ–3ರ ಪ್ರಕರಣ– 12ರ 6ನೇ ಅಂಶದಂತೆ ಜಿಬಿಎ ಸಭೆಯ ಎಲ್ಲ ತೀರ್ಮಾನಗಳು ಮತ್ತು ಸಂಕ್ಷಿಪ್ತ ಟಿಪ್ಪಣಿಗಳನ್ನು ದಾಖಲಿಸಬೇಕು. ಸಭೆಯ ಮುಗಿದ ಮೂರು ದಿನಗಳೊಳಗೆ ಅದನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಲಾಗಿದೆ. ಮೂರು ತಿಂಗಳಾದರೂ ಈ ಯಾವ ಮಾಹಿತಿಯೂ ಸಾರ್ವಜನಿಕವಾಗಿ ದೊರೆಯುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.