ADVERTISEMENT

ಜಿಬಿಎ ವ್ಯಾಪ್ತಿಯ 20 ಕೆರೆಗಳಲ್ಲಿ ಪರಿಸರಸ್ನೇಹಿ ಬೋಟಿಂಗ್‌: ಮಹೇಶ್ವರ್‌ ರಾವ್‌

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 16:25 IST
Last Updated 3 ಜನವರಿ 2026, 16:25 IST
ಮಹೇಶ್ವರ್‌ ರಾವ್‌
ಮಹೇಶ್ವರ್‌ ರಾವ್‌   

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿರುವ 20 ಕೆರೆಗಳಲ್ಲಿ ಪರಿಸರಸ್ನೇಹಿ ಬೋಟಿಂಗ್ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್‌ ರಾವ್‌ ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಅವರು, ‘ಕೆರೆಗಳನ್ನು ಸಾರ್ವಜನಿಕ ಆಕರ್ಷಣಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸಬೇಕು. ಈ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು’ ಎಂದರು.

‘ಕೆರೆಗಳನ್ನು ಆಕರ್ಷಣಾ ತಾಣಗಳಾಗಿ ಮಾಡುವುದರಿಂದ ನಾಗರಿಕರ ಒಡನಾಟ ಹೆಚ್ಚಾಗಲಿದೆ. ಕೆರೆಗಳಲ್ಲಿ ಇಂಧನ ಆಧಾರಿತ ಬೋಟಿಂಗ್ ವ್ಯವಸ್ಥೆಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಮಾಲಿನ್ಯರಹಿತ, ಪರಿಸರ ಸ್ನೇಹಿ ಬೋಟಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಯೋಜನೆ ರೂಪಿಸಬೇಕು. ಜೊತೆಗೆ ಜಲಚರ ಜೀವಜಾಲಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಶೂನ್ಯ ಮಾಲಿನ್ಯ ವ್ಯವಸ್ಥೆಯನ್ನು ರೂಪಿಸಬೇಕು’ ಎಂದು ಅವರು ನಿರ್ದೇಶನ ನೀಡಿದರು.

ADVERTISEMENT

ಜಿಬಿಎ ವ್ಯಾಪ್ತಿಯ ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಕೃತಿ ಆಧಾರಿತ ಹಾಗೂ ಪರಿಸರ ಸ್ನೇಹಿ ತತ್ವಗಳಿಗೆ ಆದ್ಯತೆ ನೀಡಬೇಕು. ಪರಿಸರ ಸ್ನೇಹಿ ಸಾರ್ವಜನಿಕ ಆಕರ್ಷಣಾ ಚಟುವಟಿಕೆಗಳು ಮತ್ತು ಪರಿಣಾಮಕಾರಿ ಪ್ರವಾಹ ನಿಯಂತ್ರಣ ಕ್ರಮಗಳನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಬಾತುಕೋಳಿಗಳು ನೀರಿನ ಸ್ವಾಭಾವಿಕ ‘ಏರೇಟರ್ಸ್’ ಹಾಗೂ ನೀರಿನ ಗುಣಮಟ್ಟದ ಸುಧಾರಣೆಗೆ ಸಹಕಾರಿಯಾಗಿವೆ. ಆದ್ದರಿಂದ ಕೆರೆಗಳಲ್ಲಿ ಬಾತುಕೋಳಿಗಳನ್ನು ಸಾಕುವ ಬಗ್ಗೆ ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕು. ಅದು ಸಾಧ್ಯವಿದ್ದಲ್ಲಿ, ಬಾತುಕೋಳಿಗಳ ಪಾಲನೆ ಮತ್ತು ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಕಾನೂನಾತ್ಮಕತೆ ದೃಷ್ಟಿಯಿಂದ ಟೆಂಡರ್  ಮೂಲಕ ವಹಿಸಬೇಕು ಎಂದರು.

ನಗರ ಪಾಲಿಕೆಗಳು ಹಾಗೂ ಸಂಬಂಧಿತ ಸಂಸ್ಥೆಗಳು ಕೈಗೊಳ್ಳುವ ಎಲ್ಲಾ ಕಾರ್ಯಗಳು ಪ್ರಕೃತಿ ಆಧಾರಿತ ಮತ್ತು ಪರಿಸರ ಸ್ನೇಹಿ ತತ್ವಗಳಿಗೆ ಕಟ್ಟುನಿಟ್ಟಾಗಿ ಅನುಗುಣವಾಗಿರಬೇಕು. ಇದರಿಂದ ದೀರ್ಘಕಾಲಿಕ ಪರಿಸರ ಸ್ಥಿರತೆ ಹಾಗೂ ಹವಾಮಾನ ಪ್ರತಿರೋಧ ಸಾಮರ್ಥ್ಯವನ್ನು ಹೆಚ್ಚಿಸಬಹುದು ಎಂದು ಅವರು ತಿಳಿಸಿದರು.

ವಿಶೇಷ ಆಯುಕ್ತ ಆರ್. ರಾಮಚಂದ್ರನ್,  ಮುಖ್ಯ ಎಂಜಿನಿಯರ್‌ ಹೇಮಲತಾ, ಕಾರ್ಯಪಾಲಕ ಎಂಜಿನಿಯರ್‌ ನಿತ್ಯಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.