ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜನೆಯಾಗಿರುವ ಹಲವು ಸಮೀಕ್ಷಕರು ಮಲ್ಲೇಶ್ವರದಲ್ಲಿರುವ ನಗರ ಪಾಲಿಕೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
‘ಸಮೀಕ್ಷೆಗೆ ತರಬೇತಿ ಸಂದರ್ಭದಲ್ಲಿ ನೀಡಲಾಗಿದ್ದ 10 ವಾರ್ಡ್‌ಗಳ ಆಯ್ಕೆಯಂತೆ ಸಮೀಕ್ಷೆ ಕಾರ್ಯವನ್ನು ಆದೇಶದಲ್ಲಿ ನೀಡಲಾಗಿಲ್ಲ. ಇದರಿಂದ ತುಂಬಾ ಸಮಸ್ಯೆಯಾಗಿದೆ. ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು’ ಎಂದು ಪ್ರತಿಭಟಿಸಿದರು.
ಮನವಿ: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಾಗಿರುವ ಅಧಿಕಾರಿ ಮತ್ತು ನೌಕರರ ನಿಯೋಜನೆಯ ಗೊಂದಲವನ್ನು ಶೀಘ್ರ ನಿವಾರಿಸಬೇಕು’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿಕೊಂಡಿದೆ.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್, ಸಮೀಕ್ಷೆಗೆ ನಿಯೋಜಿಸಿರುವ ಅಧಿಕಾರಿ/ ನೌಕರರಿಗೆ ಅವರು ವಾಸವಾಗಿರುವ ಸ್ಥಳದ ಸುತ್ತಲಿನ 10 ವಾರ್ಡ್‌ಗಳಲ್ಲಿ ಸಮೀಕ್ಷೆ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ.
‘ಸರ್ಕಾರದ ಆದೇಶ ಉಲ್ಲೇಖ (1) ಪ್ರಕಾರ, ರಾಜ್ಯ ಸರ್ಕಾರಿ ನೌಕರರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ– ನಗರ ಪಾಲಿಕೆಗಳ ಅಧಿಕಾರಿ/ನೌಕರರು, ಸಚಿವಾಲಯದ ಅಧಿಕಾರಿ/ನೌಕರರು, ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಅಂಗಸಂಸ್ಥೆಗಳ ಅಧಿಕಾರಿ ನೌಕರರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ. ತರಬೇತಿ ನೀಡುವ ಸಮಯದಲ್ಲಿ 10 ವಾರ್ಡ್‌ಗಳನ್ನು ಆಯ್ಕೆಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಆದರೆ ಅದರಂತೆ ನಿಯೋಜಿಸಲಾಗಿಲ್ಲ’ ಎಂದು ಹೇಳಿದ್ದಾರೆ.
‘ಸರ್ಕಾರಿ ಅಧಿಕಾರಿ ಮತ್ತು ನೌಕರರು ಈಗಾಗಲೇ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ, ಪದವೀಧರ/ ಶಿಕ್ಷಕರ ಕ್ಷೇತ್ರದ ಚುನಾವಣೆ ಹಾಗೂ ಇನ್ನಿತರೆ ಗಣತಿ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ. ಆದರೆ 2025ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಅಧಿಕಾರಿ ನೌಕರರು ಆಯ್ಕೆ ಮಾಡಿರುವ ಸ್ಥಳಗಳನ್ನು ನೀಡದೆ, ಗಣತಿದಾರರು ವಾಸವಾಗಿರುವ ಸ್ಥಳದಿಂದ ಸುಮಾರು 25 ಕಿ.ಮೀ. ದೂರದಲ್ಲಿ ಸಮೀಕ್ಷೆ ಕಾರ್ಯ ನಿರ್ವಹಿಸಲು ನಿಯೋಜಿಸಿರುವುದರಿಂದ, ಅಧಿಕಾರಿ/ ನೌಕರರು ಗೊಂದಲದಲ್ಲಿ ತೊಡಗಿ, ಕೆಲವು ಅಧಿಕಾರಿ ಮತ್ತು ನೌಕರರು ಅನಾರೋಗ್ಯದಿಂದ ಮಾನಸಿಕವಾಗಿ ನೋವನ್ನು ಅನುಭವಿಸುತ್ತಿದ್ದಾರೆ’ ಎಂದಿದ್ಧಾರೆ.
ವೇತನ ಪಾವತಿ: ಜಿಬಿಎ ಹಾಗೂ ಐದು ನಗರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರಿಗೆ ಸೋಮವಾರ ವೇತನ ಪಾವತಿಸಲಾಗಿದೆ.
‘ಅ.4ರವರೆಗೂ ವೇತನ ಹಾಗೂ ನಿವೃತ್ತರಿಗೆ ಸೌಲಭ್ಯ ಕಲ್ಪಿಸಿಲ್ಲ, ಕೂಡಲೇ ಪಾವತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ಮನವಿ ಮಾಡಲಾಗಿತ್ತು.
‘ಸಮೀಕ್ಷೆ ನಿಯೋಜಿಸಿರುವ ಸುಮಾರು 15 ಸಾವಿರ ಸಮೀಕ್ಷರಲ್ಲಿ ಹೆಚ್ಚಿನ ಪ್ರಮಾಣದವರು ಬೆಂಗಳೂರು ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ ವಾಸಿಸುತ್ತಾರೆ. ಎಲ್ಲರಿಗೂ ಅವರ ನಿವಾಸಗಳ ಸುತ್ತಮುತ್ತಲಿನ 10 ವಾರ್ಡ್‌ಗಳಲ್ಲೇ ಸಮೀಕ್ಷೆಗೆ ನಿಯೋಜಿಸುವುದು ಕಷ್ಟವಾಗುತ್ತದೆ. ಹೀಗಾಗಿ ದೂರದ ಪ್ರದೇಶಗಳಲ್ಲೂ ಸಮೀಕ್ಷೆ ಮಾಡಬೇಕಾಗುತ್ತದೆ’ ಎಂದು ಮಲ್ಲೇಶ್ವರದ ಪಾಲಿಕೆ ಕಚೇರಿಯಲ್ಲಿ ಸಮೀಕ್ಷಕರು ನಡೆಸಿದ ಪ್ರತಿಭಟನೆಗೆ ಮಹೇಶ್ವರ್ ರಾವ್ ಪ್ರತಿಕ್ರಿಯಿಸಿದರು. ‘ಸಮೀಕ್ಷೆಗೆ ನಿಯೋಜಿಸಿರುವ ಬಹುಪಾಲು ಎಲ್ಲರೂ ಸಮೀಕ್ಷೆಗೆ ತೆರಳಿದ್ದಾರೆ. ಕೆಲವರಿಗಷ್ಟೇ ಸಮಸ್ಯೆ ಇದೆ. ಸಾಧ್ಯವಾದಷ್ಟು ಪರಿಹಾರ ಕಲ್ಪಿಸಲಾಗುತ್ತಿದೆ’ ಎಂದು ಹೇಳಿದರು. ‘ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷಕರಿಗೆ ಕೆಲವು ತೊಂದರೆಗಳಾಗಿರುವುದು ನಿಜ. ಒಂದೆರಡು ದಿನ ಇಂತಹ ಸಮಸ್ಯೆ ಇದ್ದೇ ಇರುತ್ತದೆ. ಇನ್ನೆರಡು ದಿನದಲ್ಲಿ ಅವುಗಳನ್ನು ನಿವಾರಿಸಲಾಗುತ್ತದೆ’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.