ADVERTISEMENT

ಬೆಂಗಳೂರು | ಐದು ನಗರ ಪಾಲಿಕೆಗಳ ವಾರ್ಡ್‌ ವಿಂಗಡಣೆ: ದೂರುಗಳ ಮಹಾಪೂರ

ಐದು ನಗರ ಪಾಲಿಕೆಗಳ 368 ವಾರ್ಡ್‌ ಮರುವಿಂಗಡಣೆ: ಆಕ್ಷೇಪಣೆ ಸಲ್ಲಿಸಲು ಇಂದೇ ಕೊನೆ ದಿನ

ಆರ್. ಮಂಜುನಾಥ್
Published 14 ಅಕ್ಟೋಬರ್ 2025, 23:26 IST
Last Updated 14 ಅಕ್ಟೋಬರ್ 2025, 23:26 IST
–
   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ವಾರ್ಡ್‌ಗಳ ಮರು ವಿಂಗಡಣೆಗೆ ಸಾರ್ವಜನಿಕರು, ಜನಪ್ರತಿನಿಧಿಗಳಿಂದ ದೂರು/ ಆಕ್ಷೇಪಣೆಗಳ ಮಹಾಪೂರವೇ ಹರಿದುಬಂದಿದೆ.

ವಾರ್ಡ್‌ ಗಡಿ, ವಾರ್ಡ್‌ ಹೆಸರು ಹಾಗೂ ಹಿಂದಿದ್ದ ಒಂದೇ ವಾರ್ಡ್‌ ಪ್ರದೇಶ ಎರಡು ಪಾಲಿಕೆಗಳಲ್ಲಿ ವಿಂಗಡಣೆಯಾಗಿರುವುದು, ವಿಧಾನಸಭೆ ಕ್ಷೇತ್ರವೊಂದರ ಪ್ರದೇಶಗಳು ಎರಡು ನಗರ ಪಾಲಿಕೆಗಳ ವ್ಯಾಪ್ತಿಗೆ ಸೇರಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಐದೂ ನಗರ ಪಾಲಿಕೆಗಳಲ್ಲಿ ಒಟ್ಟಾರೆಯಾಗಿ 368 ವಾರ್ಡ್‌ಗಳನ್ನು ರಚಿಸಲಾಗಿದ್ದು, ಕರಡು ಅಧಿಸೂಚನೆಯಲ್ಲಿ ವಾರ್ಡ್‌ಗಳು ಒಳಗೊಳ್ಳುವ ಪ್ರದೇಶ ಹಾಗೂ ಗಡಿಯನ್ನು ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದ್ದು, ನಕ್ಷೆಯನ್ನು ಜಿಬಿಎ ಪ್ರಕಟಿಸಿದೆ. ಆದರೆ, ಅದರಲ್ಲಿ ಪ್ರತಿ ವಾರ್ಡ್‌ನಲ್ಲಿ ಜನಸಂಖ್ಯೆ ಹಾಗೂ ಮತದಾರರ ವಿವರಗಳು ಇಲ್ಲ. ಒಂದು ವಾರ್ಡ್‌ನಲ್ಲಿ 37 ಸಾವಿರ ಜನಸಂಖ್ಯೆ ಇದ್ದರೆ ಮತ್ತೊಂದರಲ್ಲಿ 17 ಸಾವಿರ ಜನಸಂಖ್ಯೆ ಇದೆ. ಇದು ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಯ (ಜಿಬಿಜಿಎ) ಉಲ್ಲಂಘನೆಯಾಗಿದೆ.

ADVERTISEMENT

ವಾರ್ಡ್‌ಗಳ ಜನಸಂಖ್ಯೆ ಬಹುಮಟ್ಟಿಗೆ ಒಂದೇ ಆಗಿರಬೇಕು. ವಿಧಾನಸಭೆ ಸದಸ್ಯರ ಕ್ಷೇತ್ರದ ವಾರ್ಡ್‌ ಅನ್ನು ಇತರೆ ಕ್ಷೇತ್ರಗಳಿಗೆ ವ್ಯಾಪಿಸಬಾರದು ಎಂದು ಹೇಳಲಾಗಿದೆ. ಆದರೆ, ಕೇಂದ್ರ ಭಾಗದ ವಾರ್ಡ್‌ಗಳಲ್ಲಿ 25 ಸಾವಿರದಿಂದ 30 ಸಾವಿರ ಜನಸಂಖ್ಯೆ ಇದ್ದರೆ, ಹೊರಭಾಗದ ವಾರ್ಡ್‌ಗಳಲ್ಲಿ 17 ಸಾವಿರದಿಂದ 25 ಸಾವಿರ ಜನಸಂಖ್ಯೆ ಇದೆ ಎಂದು ಜನಪ್ರತಿನಿಧಿಗಳು ಹಾಗೂ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲಿರುವ ಟಿಕೆಟ್‌ ಆಕಾಂಕ್ಷಿಗಳು ಆರೋಪಿಸುತ್ತಿದ್ದಾರೆ.

‘ವಾರ್ಡ್‌ಗಳ ಕರಡು ಅಧಿಸೂಚನೆಯಲ್ಲಿ ಜನಸಂಖ್ಯೆ ಹಾಗೂ ಮತದಾರರ ವಿವರಗಳು ಲಭ್ಯವಿಲ್ಲದ ಕಾರಣ ಹೆಚ್ಚು ಗೊಂದಲ ಸೃಷ್ಟಿಯಾಗಿದೆ. ಒಬೊಬ್ಬರು ಒಂದೊಂದು ಲೆಕ್ಕಾಚಾರ ಮಾಡಿರುವುದರಿಂದ ಆಕ್ಷೇಪ, ಅಸಮಾಧಾನಗಳು ಹೆಚ್ಚಾಗಿವೆ’ ಎಂದು ರಾಜಕೀಯ ಪಕ್ಷಗಳ ಮುಖಂಡರು ದೂರುತ್ತಿದ್ದಾರೆ.

ಬಿಬಿಎಂಪಿಯಲ್ಲಿದ್ದ 198 ವಾರ್ಡ್‌ಗಳನ್ನೇ ಐದೂ ನಗರ ಪಾಲಿಕೆಗಳಿಗೆ ವಿಂಗಡಿಸಿ ಜುಲೈ 19ರಂದು ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಜಿಬಿಎ ರಚನೆಯೊಂದಿಗೆ ಕೇಂದ್ರ, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ನಗರ ಪಾಲಿಕೆಗಳನ್ನಾಗಿ ಸೆಪ್ಟೆಂಬರ್‌ 2ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಐದೂ ನಗರ ಪಾಲಿಕೆಗಳಿಗೆ ವಾರ್ಡ್‌ಗಳನ್ನು ಮರು ವಿಂಗಡಿಸಿ, ಗಡಿ ನಿರ್ಧಾರ ಮಾಡಿ ಸೆಪ್ಟೆಂಬರ್‌ 30ರಂದು ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಇದಕ್ಕೆ ಆಕ್ಷೇಪಣೆ/ ಸಲಹೆ ನೀಡುವ ಗಡುವು ಬುಧವಾರ (ಅಕ್ಟೋಬರ್‌ 15) ಮುಗಿಯಲಿದೆ.

ಸಾವಿರಾರು ಆಕ್ಷೇಪ: ಮುನಿರಾಜು

‘ದಾಸರಹಳ್ಳಿ ವಿಧಾನಸಭೆ ಕ್ಷೇತ್ರ ಎರಡು ನಗರ ಪಾಲಿಕೆಗಳಿಗೆ ಹಂಚಿಹೋಗಿದೆ. ಈ ಬಗ್ಗೆ ನಗರ ಪಾಲಿಕೆಗಳ ಕರಡು ಅಧಿಸೂಚನೆ ಹೊರಡಿಸಿದ್ದ ಸಮಯದಲ್ಲೇ ವಿಧಾನಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದೆ. ಅದನ್ನು ಮೀರಿ ಅಂತಿಮ ಆದೇಶ ಹೊರಡಿಸಲಾಯಿತು. ಇದೀಗ ವಾರ್ಡ್‌ಗಳ ರಚನೆಯಲ್ಲಿ ಸಾಕಷ್ಟು ಸಮಸ್ಯೆಗಳಾಗಿವೆ. ಜನಸಂಖ್ಯೆ ಹಾಗೂ ವ್ಯಾಪ್ತಿಯನ್ನು ಮನಬಂದಂತೆ ಬದಲಾಯಿಸಲಾಗಿದೆ. ಗಡಿ ರಚನೆಯಲ್ಲಿ ಗೊಂದಲವಾಗಿದ್ದು ನಾಗರಿಕರನ್ನು ಗೊಂದಲಕ್ಕೆ ದೂಡಿದೆ. ನಮ್ಮ ಕ್ಷೇತ್ರದಲ್ಲಿ ಸಾವಿರಾರು ನಾಗರಿಕರು ವಾರ್ಡ್‌ ರಚನೆ ಗಡಿ ಬಗ್ಗೆ ಆಕ್ಷೇಪಗಳನ್ನು ಸಲ್ಲಿಸಿದ್ದಾರೆ’ ಎಂದು ದಾಸರಹಳ್ಳಿ ಶಾಸಕ ಎಸ್‌. ಮುನಿರಾಜು ಹೇಳಿದರು.

ಜನಸಂಖ್ಯೆ ಆಧಾರದಲ್ಲಿಲ್ಲ: ವಿನೋದ್

‘ನಗರ ಪಾಲಿಕೆಗಳಲ್ಲಿ ರಚಿಸಿರುವ ವಾರ್ಡ್‌ಗಳಲ್ಲಿ ಮತದಾರರನ್ನು ಸಮನಾಗಿ ಹಂಚಬೇಕು. ಭೌಗೋಳಿಕವಾಗಿ ಮಾತ್ರ ವಾರ್ಡ್‌ ರಚಿಸಿದರೆ ಎಲ್ಲ ಜನರಿಗೆ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಐದು ನಗರ ಪಾಲಿಕೆಗಳ ಮೂಲಕ 1.5 ಕೋಟಿಗೂ ಹೆಚ್ಚು ಜನರಿಗೆ ಸೌಲಭ್ಯ ನೀಡಬೇಕಾದರೆ ಇನ್ನೂ ಹೆಚ್ಚಿನ ವಾರ್ಡ್‌ಗಳ ಅಗತ್ಯವಿದೆ’ ಎಂದು ನಾಗರಿಕ ಕಾರ್ಯಕರ್ತ ವಿನೋದ್‌ ಜಾಕೊಬ್‌ ಅಭಿಪ್ರಾಯಪಟ್ಟರು.

ಫೆಬ್ರುವರಿಯಲ್ಲಿ ಚುನಾವಣೆ?

ನಗರ ಪಾಲಿಕೆಗಳ ಚುನಾವಣೆಗೆ ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಲು ವಾರ್ಡ್‌ ಮರುವಿಂಗಡಣೆ ಅಂತಿಮಗೊಳಿಸಲು ಸಮಯ ನಿಗದಿ ಮಾಡಿರುವ ಕಾರ್ಯಸೂಚಿಗೆ ಜಿಬಿಎ ಮೊದಲ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದರಂತೆ 2026ರ ಫೆಬ್ರುವರಿ ಮಧ್ಯಭಾಗದಲ್ಲಿ ನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್‌ ಅಂತ್ಯಕ್ಕೆ ಗ್ರೇಟರ್‌ ಬೆಂಗಳೂರು ಪ್ರದೇಶಕ್ಕಾಗಿ ಸ್ಥಳೀಯ ಯೋಜನಾ ಪ್ರಾಧಿಕಾರವನ್ನಾಗಿ ಜಿಬಿಎಯನ್ನು ಗುರುತುಪಡಿಸಿ ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್‌ ಆರಂಭದೊಳಗೆ ನಗರ ಪಾಲಿಕೆಗಳ ವಾರ್ಡ್‌ ಮರು ವಿಂಗಡಣೆ ಅಂತಿಮ ಅಧಿಸೂಚನೆಯಾಗಲಿದೆ. ನವೆಂಬರ್‌ 30ರಂದು ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ತಯಾರಿಕೆಯನ್ನು ಆರಂಭಿಸುತ್ತದೆ. 2026ರ ಫೆಬ್ರುವರಿ ಮಧ್ಯಭಾಗದಲ್ಲಿ ರಾಜ್ಯ ಚುನಾವಣಾ ಆಯೋಗ ನಗರ ಪಾಲಿಕೆಗಳ ಚುನಾವಣೆಗೆ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ ಎಂದು ಜಿಬಿಎ ಮೊದಲ ಸಭೆಯಲ್ಲಿ ಅನುಮೋದನೆಯಾದ ಕಾರ್ಯಸೂಚಿಯಲ್ಲಿ ತಿಳಿಸಲಾಗಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.