ADVERTISEMENT

ಜಿಬಿಎ ವ್ಯಾಪ್ತಿಯಲ್ಲಿ ಶೇ 10ರಷ್ಟು ಜಾತಿವಾರು ಸಮೀಕ್ಷೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 1:26 IST
Last Updated 8 ಅಕ್ಟೋಬರ್ 2025, 1:26 IST
<div class="paragraphs"><p>ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ </p></div>

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ

   

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಶೇ 10ರಷ್ಟು ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದರು.

ADVERTISEMENT

ಸಮೀಕ್ಷೆಗಾಗಿ ವಿವಿಧ ಇಲಾಖೆಗಳಿಂದ 26 ಸಾವಿರ ಜನರನ್ನು ಗುರುತಿಸಲಾಗಿತ್ತು. ಅನಾರೋಗ್ಯ ಸೇರಿದಂತೆ ಹಲವು ಕಾರಣಗಳಿಂದಾಗಿ 5,500 ಮಂದಿಗೆ ಸಮೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಮಂಗಳವಾರ 18 ಸಾವಿರಕ್ಕೂ ಹೆಚ್ಚು ಸಮೀಕ್ಷಕರು ಸಮೀಕ್ಷೆ ನಡೆಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಕ್ಟೋಬರ್‌ 4ರಿಂದ ಸಮೀಕ್ಷೆ ಆರಂಭವಾಗಿದ್ದು, ಮೊದಲ ದಿನ ಹೊರತುಪ‍ಡಿಸಿದರೆ ನಂತರದ ಪ್ರತಿದಿನ 1.75 ಲಕ್ಷದಿಂದ ಎರಡು ಲಕ್ಷ ಮನೆಗಳ ಸಮೀಕ್ಷೆ ನಡೆಯುತ್ತಿದೆ. ಅಕ್ಟೋಬರ್‌ 19ರೊಳಗೆ ಸಮೀಕ್ಷೆ ಮುಗಿಸುವಂತೆ ಮುಖ್ಯಮಂತ್ರಿಯವರು ಗಡುವು ನೀಡಿದ್ದು, ಪ್ರತಿದಿನ ಮೂರು ಲಕ್ಷ ಮನೆಗಳ ಸಮೀಕ್ಷೆ ಮುಗಿಸಬೇಕಿದೆ. ಬೆಸ್ಕಾಂ ಮೀಟರ್‌ಗಳ ಪ್ರಕಾರ, ಸುಮಾರು 46 ಲಕ್ಷ ಮನೆಗಳಿಗೆ ಯುಎಚ್‌ಐಡಿ ಅಂಟಿಸಲಾಗಿದ್ದು, ಇದರಲ್ಲಿ ಶೇ 10ರಷ್ಟು ಮನೆಗಳ ಸಮೀಕ್ಷೆ ಮಂಗಳವಾರದ ಅಂತ್ಯಕ್ಕೆ ಪೂರ್ಣಗೊಂಡಿದೆ ಎಂದು ಹೇಳಿದರು.

ಸಮೀಕ್ಷಕರಿಗೆ ಪ್ರತಿ ನಿತ್ಯ ₹200 ಪ್ರಯಾಣ ಭತ್ಯೆ ನೀಡಲಾಗುತ್ತಿದೆ. ಎಲ್ಲರಿಗೂ ಅವರು ಆಯ್ಕೆ ಮಾಡಿಕೊಂಡಿರುವ ವಾರ್ಡ್‌ಗಳಲ್ಲೇ ನಿಯೋಜನೆ ಮಾಡಲು ಸಾಧ್ಯವಿಲ್ಲ. ಅವರಿಗೆ ನೀಡಲಾಗಿರುವ ಪ್ರದೇಶಗಳಲ್ಲೇ ಸಮೀಕ್ಷೆ ನಡೆಸಬೇಕು. ಸಮೀಕ್ಷೆಗೆ ಹಾಜರಾಗದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಮಹದೇವಪುರ, ಬೊಮ್ಮನಹಳ್ಳಿಯಲ್ಲಿ ಶೇ 50ರಷ್ಟು ಸ್ಥಳೀಯ ಸರ್ಕಾರಿ ಅಧಿಕಾರಿ, ಸಿಬ್ಬಂದಿಯನ್ನು ಸಮೀಕ್ಷೆಗೆ ನಿಯೋಜನೆ ಮಾಡಲಾಗಿದೆ. ಬಾಕಿ ಇರುವ ಪ್ರದೇಶಕ್ಕೆ ನಗರದ ಇತರೆ ಭಾಗದ ಅಧಿಕಾರಿ ಸಿಬ್ಬಂದಿ ನಿಯೋಜಿಸುವುದು ಅನಿವಾರ್ಯವಾಗಿದೆ. ಅಲ್ಲಿ ಸರ್ವೇ ಕಾರ್ಯಕ್ಕೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದರೆ ಆ ಭಾಗದಲ್ಲಿಯೂ ಸರ್ವೇ ನಡೆಸಲೇಬೇಕಾಗಿದೆ ಎಂದು ಹೇಳಿದರು.

ಮಾತುಕತೆ: ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಸಮೀಕ್ಷೆಗೆ ಸಹಕಾರ ಸಿಗುತ್ತಿಲ್ಲ. ಹೀಗಾಗಿ, ನಗರ ಪಾಲಿಕೆಯ ಆಯುಕ್ತರು ಹಾಗೂ ಜಿಬಿಎ ಅಧಿಕಾರಿಗಳಿಗೆ ಅಪಾರ್ಟ್‌ಮೆಂಟ್‌ಗಳ ಸಂಘದವರೊಂದಿಗೆ ಮಾತುಕತೆ ನಡೆಸಿ, ಅವರ ಮೂಲಕವೇ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅಗತ್ಯ ಪ್ರಶ್ನೆಗಳಿರುವ ಸಮೀಕ್ಷೆಯ ಕರಪತ್ರಗಳನ್ನು ಮುದ್ರಿಸಲಾಗಿದ್ದು, ಅವುಗಳನ್ನು ಭರ್ತಿ ಮಾಡಿಕೊಟ್ಟರೆ ಸಮೀಕ್ಷೆ ಬೇಗ ಮುಗಿಯುತ್ತದೆ. ಸುಮಾರು ಒಂದು ಲಕ್ಷ ಕರಪತ್ರಗಳನ್ನು ಮುದ್ರಿಸಿ, ಹಂಚಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಒನ್: ಆನ್‌ಲೈನ್‌ನಲ್ಲಿ ಸಮೀಕ್ಷೆಯನ್ನು ನಾಗರಿಕರೇ ಪೂರ್ಣಗೊಳಿಸಬಹುದು. ಬೆಂಗಳೂರು ಒನ್‌ ಕೇಂದ್ರಗಳಲ್ಲಿಯೂ ಸಮೀಕ್ಷೆಯ ಅರ್ಜಿ ತುಂಬಲು, ಅಪ್‌ಲೋಡ್‌ ಮಾಡಲು ಅವಕಾಶ ನೀಡಲು ಚಿಂತಿಸಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.