ನಯನ ಸಭಾಂಗಣದಲ್ಲಿ ಮಂಗಳವಾರ ಕದಳಿ ಮಹಿಳಾ ವೇದಿಕೆ, ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕದಳಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗೀತಾ ಮಹದೇವ ಪ್ರಸಾದ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರು: ‘ಎಲ್ಲ ಕ್ಷೇತ್ರದಲ್ಲೂ ಮನುಷ್ಯತ್ವ ಮಾಯವಾಗುತ್ತಿದ್ದು, ರಾಜಕೀಯ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ’ ಎಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಸುನೀಲ್ ಶಾಸ್ತ್ರಿ ಬೇಸರ ವ್ಯಕ್ತಪಡಿಸಿದರು.
ಕದಳಿ ಮಹಿಳಾ ವೇದಿಕೆ, ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಜಂಟಿಯಾಗಿ ನಯನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕದಳಿ ಪ್ರಶಸ್ತಿ ಪ್ರದಾನ ಹಾಗೂ ಪ್ರಶಸ್ತಿ ಪುರಸ್ಕೃತರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನನ್ನ ತಂದೆಯವರು ಬದುಕಿನುದ್ದಕ್ಕೂ ಪ್ರಾಮಾಣಿಕತೆ, ಸತ್ಯದೊಂದಿಗೆ ಬದುಕಿದರು. ಅದನ್ನು ನಮಗೂ ಹೇಳಿಕೊಟ್ಟು ಯಾವಾಗಲೂ ಸತ್ಯವನ್ನೇ ಹೇಳಿ ಎಂದು ತಿಳಿಸಿಕೊಟ್ಟರು. ಜೈ ಜವಾನ್, ಜೈ ಕಿಸಾನ್ ಎನ್ನುವುದು ಅವರ ಪ್ರಮುಖ ಘೋಷ ವಾಕ್ಯವಾಗಿತ್ತು. ಈಗ ಇವರೆಡರ ಜೊತೆಗೆ ಜೈ ಇನ್ಸಾನ್ (ಜೈ ಮಾನವ) ಕೂಡ ಸೇರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.
‘ಬಾಲಕನಿದ್ದಾಗ ತಂದೆಯವರನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ ಅವರು ನಮಗೆ ಸಿಗುತ್ತಿರಲಿಲ್ಲ. ಸಿಟ್ಟುಗೊಂಡರೆ ನಗುವೇ ಅವರ ಉತ್ತರವಾಗುತ್ತಿತ್ತು. ನನಗೆ ಆರು ಮಕ್ಕಳು, ಕುಟುಂಬವೇ ಸರ್ವಸ್ವವಲ್ಲ. ಇಡೀ ದೇಶವೇ ನನ್ನ ಕುಟುಂಬ ಎಂದು ಅವರು ಹೇಳುತ್ತಿದ್ದರು. ಅವರ ಈ ಉತ್ತರ ನನ್ನಲ್ಲಿ ಬದಲಾವಣೆಗೂ ಕಾರಣವಾಯಿತು’ ಎಂದು ನೆನಪಿಸಿಕೊಂಡರು.
ಅತಿಥಿಯಾಗಿದ್ದ ವಿಮರ್ಶಕಿ ಎಂ.ಎಸ್.ಆಶಾದೇವಿ ಮಾತನಾಡಿ, ‘ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನಡೆದಂತೆ ನುಡಿದವರು. ಈ ಕಾರಣದಿಂದಲೇ ಅವರನ್ನು ಉನ್ನತ ಸ್ಥಾನದಲ್ಲಿ ನೋಡುತ್ತೇವೆ. ಇಂತಹ ಸನ್ನಿವೇಶ ಕರ್ನಾಟಕದಲ್ಲಿ 12ನೇ ಶತಮಾನದಲ್ಲಿಯೇ ಇತ್ತು. ಬಸವಣ್ಣ, ಅಕ್ಕಮಹಾದೇವಿ ಅವರ ಬದುಕು, ವಚನಗಳು ಪ್ರೇರಣೆ ನೀಡಿದವು’ ಎಂದು ಹೇಳಿದರು.
ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕಿ ಅಕ್ಕಮಹಾದೇವಿ ಮಾದರಿಯನ್ನು ಬಿಟ್ಟು ಹೋಗಿದ್ದಾರೆ. ಮಹಿಳೆಯರು ಕೌಟುಂಬಿಕ ದೌರ್ಜನ್ಯಗಳನ್ನು ಎದುರಿಸುತ್ತಲೇ ನೋವು ಉಣ್ಣುವ ಬದಲು ಪರಿವರ್ತನೆಗೆ ಮುಂದಾಗಬೇಕು. ಕೋಮುವಾದದ ಕಾಯಿಲೆಗೆ ಮಹಿಳೆಯರಲ್ಲಿ ಮಾತ್ರ ಪರಿಹಾರವಿದೆ ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ: ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್ ಅವರಿಗೆ ಕದಳಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಸಮಾಜ ಸೇವಕಿ ಎಸ್.ಜಿ.ಸುಶೀಲಮ್ಮ, ಗೌರವ ಡಾಕ್ಟರೇಟ್ ಪಡೆದ ನಿವೃತ್ತ ಡಿಜಿಪಿ ಎಲ್.ರೇವಣ್ಣಸಿದ್ದಯ್ಯ, ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು.