ADVERTISEMENT

ಬೆಂಗಳೂರು | ಲಿಂಗಪರಿವರ್ತನೆಗೆ ಯತ್ನ: ಇಬ್ಬರ ವಶ

ತಮಿಳುನಾಡಿನ ಮಧುರೈನಲ್ಲಿ ಯುವಕನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 15:55 IST
Last Updated 9 ಡಿಸೆಂಬರ್ 2025, 15:55 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಯುವಕನೊಬ್ಬನನ್ನು ಲಿಂಗತ್ವ ಅಲ್ಪಸಂಖ್ಯಾತರು ಕರೆದೊಯ್ದು ಲಿಂಗಪರಿವರ್ತನೆಗೆ ಯತ್ನಿಸಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ) ಠಾಣೆ ಪೊಲೀಸರು, ಸೈಯದ್‌ ಸಾಜೀದ್‌ (23) ಅವರನ್ನು ತಮಿಳುನಾಡಿನಲ್ಲಿ ಮಧುರೈನಲ್ಲಿ ರಕ್ಷಣೆ ಮಾಡಿ ನಗರಕ್ಕೆ ಕರೆ ತಂದಿದ್ದಾರೆ.

ಕೃತ್ಯ ಎಸಗಿದ ಆರೋಪದಡಿ ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ. ನಾಪತ್ತೆ ಪ್ರಕರಣದ ದೂರು ಆಧರಿಸಿ ತನಿಖೆ ನಡೆಸಿದಾಗ ಕೃತ್ಯ ಬಯಲಾಗಿದೆ.

ಡಿ.ಜೆ.ಹಳ್ಳಿಯ ಮಸೀದಿಯೊಂದರ ಮೌಲ್ವಿಯ ಪುತ್ರ ಸೈಯದ್‌ ಸಾಜೀದ್‌ ಅವರು ಡಿ.5ರಂದು ಸಂಜೆ ಮಸೀದಿಗೆ ಹೋಗುವುದಾಗಿ ಹೇಳಿ ತೆರಳಿದ್ದರು. ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ಆತಂಕಗೊಂಡ ಮನೆಯವರು ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ತಂಡ, ಯುವಕ ನಡೆದು ಹೋಗಿದ್ದ ರಸ್ತೆಯಲ್ಲಿದ್ದ ಸಿ.ಸಿ.ಟಿ.ವಿಯಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸಿದರು. ಮೇಖ್ರಿ ವೃತ್ತದ ಬಳಿ ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ಜತೆ ಹೋಗುತ್ತಿರುವುದು ಪತ್ತೆಯಾಯಿತು ಎಂದು ಮೂಲಗಳು ತಿಳಿಸಿವೆ.

ವಿಶೇಷ ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸಿ ತಮಿಳುನಾಡಿನ ಮಧುರೈನಲ್ಲಿ ಯುವಕನನ್ನು ರಕ್ಷಣೆ ಮಾಡಲಾಗಿದೆ. ಯುವಕನಿಗೆ ಯಾವುದೇ ಶಸ್ತ್ರಚಿಕಿತ್ಸೆ ನಡೆದಿಲ್ಲ. ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಡಿ.ಜೆ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.