
ಕೃಷಿ ಇಲಾಖೆಯ ಕಾರ್ಯಕ್ರಮದಲ್ಲಿ ಜಿಐ–ಜೆಡ್ ಭಾರತದ ಮುಖ್ಯಸ್ಥ ಹನ್ಸ್ ಜುರ್ಗನ್ ಕ್ಲೆನ್ ಹಾಗೂ ಎನ್. ಚಲುವರಾಯಸ್ವಾಮಿ ಕೈಕುಲುಕಿದರು.
ಬೆಂಗಳೂರು: ‘ರೈತರ ಆದಾಯ ದ್ವಿಗುಣಗೊಳಿಸುವ ಸಲುವಾಗಿ ಕೃಷಿ ತ್ಯಾಜ್ಯಗಳ ಮರುಬಳಕೆ, ದೇಸಿ ತಳಿಗಳ ಸಂರಕ್ಷಣೆ, ಭೌಗೋಳಿಕ ಮಾನ್ಯತೆ ಹೊಂದಿರುವ (ಜಿಐ ಟ್ಯಾಗ್) ಉತ್ಪನ್ನಗಳನ್ನು ಬಳಸುವಂತೆ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಕೃಷಿ ಇಲಾಖೆ ಆಯೋಜಿಸಿರುವ ‘ಉತ್ಪಾದನೋತ್ತರ ಕೃಷಿ ಹಾಗೂ ರೈತರ ಸಬಲೀಕರಣ’ ಎಂಬ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಬುಧವಾರ ಇಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
‘ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡಲು ಈಗಾಗಲೇ ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪಿಸಲಾಗಿದ್ದು, ಅದರ ಮೂಲಕ ರೈತರ ಉತ್ಪನ್ನಗಳ ಸಂಸ್ಕರಣೆಗೆ ಆದ್ಯತೆ ನೀಡಲಾಗುತ್ತಿದೆ. ಈ ಬಗ್ಗೆ ಜರ್ಮನಿ, ಅಮೆರಿಕ, ವಿಯೆಟ್ನಾಂ, ಕಾಂಬೋಡಿಯಾ ಹಾಗೂ ನಮ್ಮ ದೇಶದ ವಿವಿಧ ರಾಜ್ಯಗಳಿಂದ ಬಂದಿರುವ ತಜ್ಞರು ಹಾಗೂ ರೈತರೊಂದಿಗೆ ಈ ಕುರಿತು ಚರ್ಚಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
‘ದೇಶದಲ್ಲಿ ಪ್ರಥಮ ಬಾರಿಗೆ ನಮ್ಮ ರಾಜ್ಯದಲ್ಲಿ ಉತ್ಪಾದನೋತ್ತರ ಕೃಷಿ ಹಾಗೂ ರೈತರ ಸಬಲೀಕರಣ ಎಂಬ ಧ್ಯೇಯ ವಾಕ್ಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವನ್ನು ಫೆ. 6ರಿಂದ 8ರವರೆಗೆ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ಮೇಳವು ಮುಖ್ಯವಾಗಿ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಕೃಷಿ ಪರಿಸರ ವಿಜ್ಞಾನ ಹಾಗೂ ಬ್ರ್ಯಾಂಡಿಂಗ್‌ಗೆ ಆದ್ಯತೆ ನೀಡಲಿದೆ’ ಎಂದು ವಿವರಿಸಿದರು.
ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಮೊಹಮ್ಮದ ಪರವೇಜ ಬಂತನಾಳ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.