ADVERTISEMENT

‘ಕಾರ್ನಾಡರನ್ನು ದೂರವಿಟ್ಟ ಕನ್ನಡ ಚಿತ್ರರಂಗ’

ಹಿರಿಯ ನಿರ್ದೇಶಕ ಗಿರೀಶ ಕಾಸರವಳ್ಳಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 20:29 IST
Last Updated 16 ಜೂನ್ 2019, 20:29 IST
ನಾಗತಿಹಳ್ಳಿ ಚಂದ್ರಶೇಖರ ಹಾಗೂ ಟಿ.ಎಸ್. ನಾಗಾಭರಣ ಚರ್ಚಿಸಿದರು. ಬಿ.ಜಯಶ್ರೀ, ಗಿರೀಶ ಕಾಸರವಳ್ಳಿ, ಕೆ.ಎಂ. ಚೈತನ್ಯ ಇದ್ದರು ಪ್ರಜಾವಾಣಿ ಚಿತ್ರ
ನಾಗತಿಹಳ್ಳಿ ಚಂದ್ರಶೇಖರ ಹಾಗೂ ಟಿ.ಎಸ್. ನಾಗಾಭರಣ ಚರ್ಚಿಸಿದರು. ಬಿ.ಜಯಶ್ರೀ, ಗಿರೀಶ ಕಾಸರವಳ್ಳಿ, ಕೆ.ಎಂ. ಚೈತನ್ಯ ಇದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗಿರೀಶ ಕಾರ್ನಾಡರನ್ನು ಕನ್ನಡ ಚಿತ್ರರಂಗ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿಲ್ಲ. ಅವರನ್ನು ಹೊರಗೆ ಇಟ್ಟಿದ್ದು ದುರಂತ. ಈ ಬಗ್ಗೆ ಚಿತ್ರರಂಗ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಚಲನಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ಹೇಳಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ವಾರ್ತಾ ಇಲಾಖೆ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಕಾರ್ನಾಡರ ಸ್ಮರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡ ಚಿತ್ರರಂಗ ಕಾರ್ನಾಡರಿಗೆ ಸೂಕ್ತ ಪ್ರಶಸ್ತಿಯನ್ನೂ ನೀಡಲಿಲ್ಲ’ ಎಂದರು.

‘ಕಾರ್ನಾಡರಷ್ಟು ಪ್ರಖರ ಜ್ಞಾನವಿದ್ದವರು ಇರಲಿಲ್ಲ. ಈಗಲೂ ಇಲ್ಲ. ಅವರು ಕೊಡುತ್ತಿದ್ದ ಒಳನೋಟ, ವ್ಯಾಖ್ಯಾನ ಆರೋಗ್ಯಕರವಾಗಿತ್ತು ಮತ್ತು ಸಮಾಜಕ್ಕೆ ಅವಶ್ಯವಾಗಿ‌ತ್ತು’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ನಾಟಕಕಾರ, ಸಣ್ಣಕತೆಗಾರ, ವೈಚಾರಿಕ ಲೇಖಕ, ನಟ–ನಿರ್ದೇಶಕನಾಗಿ ಹಲವು ಸ್ತರಗಳಲ್ಲಿ ನಾವು ಕಾರ್ನಾಡರನ್ನು ಕಾಣಬಹುದು. ಸೈದ್ಧಾಂತಿಕವಾಗಿ ನಮ್ಮಿಬ್ಬರ ನಡುವೆ ಒಡಕಿತ್ತು. ನನ್ನ ಮೊದಲ ಸಿನಿಮಾ ಬಿಡುಗಡೆಯಾದ ಬಳಿಕ ಅವರು ಆಪ್ತರಾದರು. ರಾಜಕೀಯ ಮತ್ತು ತಾತ್ವಿಕ ಒಳನೋಟ ಅವರಿಗಿತ್ತು’ ಎಂದು ಕಾಸರವಳ್ಳಿ ಸ್ಮರಿಸಿದರು.

‘ಪ್ರತಿಯೊಂದನ್ನೂ ಪ್ರಶ್ನಿಸಬೇಕು ಎಂಬುದು ಅವರ ಕೃತಿಗಳಲ್ಲಿ ಎದ್ದು ಕಾಣುತ್ತದೆ. ಚಳವಳಿಗೆ ಬರುವವರು ಅವರ ಲೇಖನಗಳನ್ನು ಓದಿಕೊಂಡು ಹೋರಾಟಕ್ಕೆ ಇಳಿಯಬೇಕು. ಅದ ರಲ್ಲಿಯೂ, ಕಾರ್ನಾಡರು ಸತ್ತಾಗ ಸಂಭ್ರಮಿಸಿದವರು, ಅವರ ಸಾಹಿತ್ಯವನ್ನು ಓದಿಕೊಳ್ಳಬೇಕಾದ ಅಗತ್ಯವಿದೆ’ ಎಂದರು.

ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ‘ನಾಟಕ ಹಾಗೂ ಚಿತ್ರರಂಗದಲ್ಲಿ ಹೊಸ ಬದಲಾವಣೆ ತರುವ ಪ್ರಯತ್ನವನ್ನು ಕಾರ್ನಾಡ ಮಾಡಿದ್ದರು’ ಎಂದು ಸ್ಮರಿಸಿದರು.

ನಾಟಕ ವಾಚನ–ಗಾಯನ: ಹಿರಿಯ ನಾಟಕಕಾರ ಗಿರೀಶ ಕಾರ್ನಾಡರ ಕೃತಿಗಳನ್ನು, ನಾಟಕಗಳನ್ನು ವಾಚಿಸುವ, ರಂಗಗೀತೆಗಳನ್ನು ಹಾಡುವ ಮೂಲಕ ಅವರನ್ನು ರಂಗಶಂಕರದಲ್ಲಿ ವಿಭಿನ್ನವಾಗಿ ಸ್ಮರಿಸಲಾಯಿತು.

ರಂಗಶಂಕರದ ಮುಖ್ಯಸ್ಥರಾದ ಅರುಂಧತಿ ನಾಗ್‌ ಅವರು ಕಾರ್ನಾಡರ ಕೊಡುಗೆ ಕುರಿತು ಮಾತನಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ರಂಗಕರ್ಮಿಗಳು, ನಟ–ನಟಿಯರು, ನಿರ್ದೇಶಕರು ಕಾರ್ನಾಡರ ನಾಟಕಗಳ ಆಯ್ದ ದೃಶ್ಯಗಳನ್ನು ವಾಚಿಸಿ, ಆ ಸಂದರ್ಭಗಳನ್ನು ವಿವರಿಸಿದರು.

ತುಘಲಕ್‌, ಹಯವದನ, ಯಯಾತಿ, ಟಿಪ್ಪುವಿನ ಕನಸುಗಳು ಸೇರಿದಂತೆ ಕಾರ್ನಾಡರ ನಾಟಕಗಳಲ್ಲಿ ಇತಿಹಾಸವನ್ನು ನೋಡಿರುವ ದೃಷ್ಟಿಕೋನ, ಅವುಗಳಲ್ಲಿನ ಸಾಮಾಜಿಕ ಒಳನೋಟ, ಸಾಹಿತ್ಯ ರಚನೆ ಕೌಶಲಗಳ ಬಗ್ಗೆ, ಅವರ ಕೃತಿಗಳಲ್ಲಿನ ವೈವಿಧ್ಯ ಕುರಿತು ನಿರ್ದೇಶಕ ಬಿ.ಸುರೇಶ, ಕೆ.ಎಂ. ಚೈತನ್ಯ ಸೇರಿದಂತೆ ಹಲವರು ಮಾತನಾಡಿದರು.

ನಿರ್ದೇಶಕ ಟಿ.ಎಸ್‌. ನಾಗಾಭರಣ ನೇತೃತ್ವದ ಬೆನಕ ತಂಡ ‘ಹಯವದನ’ ನಾಟಕದಲ್ಲಿನ ದೃಶ್ಯಗಳನ್ನು ವಾಚಿಸಿತು. ಬಿ. ಜಯಶ್ರೀ ಮತ್ತು ಎಂ.ಡಿ. ಪಲ್ಲವಿ ರಂಗಗೀತೆಗಳನ್ನು ಹಾಡುವ ಮೂಲಕ ಕಾರ್ನಾಡರನ್ನು ಸ್ಮರಿಸಿದರು.

ಕವಿ ಜಯಂತ ಕಾಯ್ಕಿಣಿ, ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಯ ನಟ–ನಟಿಯರು ಹಾಜರಿದ್ದರು. ಕಾರ್ನಾಡರು ರಚಿಸಿದ ನಾಟಕಗಳು ಮತ್ತು ಕೃತಿಗಳು ಹಾಗೂ ಕಾರ್ನಾಡರ ಕುರಿತು ರಚಿಸಿದ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.`

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.