ADVERTISEMENT

ಮೂರು ವರ್ಷಗಳ ಹೋರಾಟದ ಬಳಿಕ ಕೈಗಾರಿಕೆಗೆ ಭೂಮಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 18:49 IST
Last Updated 13 ಫೆಬ್ರುವರಿ 2021, 18:49 IST
ಎಲ್‌.ಗಿರೀಶ್
ಎಲ್‌.ಗಿರೀಶ್   

ಬೆಂಗಳೂರು: ಕೈಗಾರಿಕೆ ಸ್ಥಾಪಿಸಲು ಮೂರು ವರ್ಷಗಳಿಂದ ಭೂಮಿಗಾಗಿ ಕಾದಿದ್ದ ಸಂಸ್ಥೆಗೆ ಕೊನೆಗೂ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಮಿ ಮಂಜೂರು ಮಾಡಿದೆ.

ರಕ್ಷಣಾ ಕ್ಷೇತ್ರಕ್ಕೆ ಉತ್ಪನ್ನಗಳನ್ನು ತಯಾರಿಸುವ ಆಶಯದೊಂದಿಗೆ ಕನ್ನಡಿಗ ಎಂಜಿನಿಯರ್ ಎಲ್.ಗಿರೀಶ್ (ಗಿರೀಶ್ ಲಿಂಗಣ್ಣ) ಅವರು ಎಡಿಸಿ ಎಂಜಿನಿಯರಿಂಗ್ ಸಂಸ್ಥೆ ಹೆಸರಿನಲ್ಲಿ ನೆಲಮಂಗಲದ ಕೈಗಾರಿಕಾ ಪ್ರದೇಶದಲ್ಲಿ ಉತ್ಪಾದನಾ ಘಟಕ ಆರಂಭಿಸಲು ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಎಸ್‌ಐಡಿಸಿ) 2018ರಲ್ಲಿ ಅರ್ಜಿ ಸಲ್ಲಿಸಿದ್ದರು.

ಇದು ದೇಸಿ ಸಂಸ್ಥೆಯಾಗಿದ್ದು, ಸ್ವಾವಲಂಬಿ (ಆತ್ಮನಿರ್ಭರ್) ಭಾರತ ನಿರ್ಮಾಣದಲ್ಲಿ ತನ್ನದೇ ಪಾತ್ರ ವಹಿಸುತ್ತದೆ ಎಂಬ ಕಾರಣಕ್ಕೆ ಹಿಂದಿನ ರಕ್ಷಣಾ ಸಚಿವರು ಈ ಸಂಸ್ಥೆಗೆ ಭೂಮಿ ನೀಡುವಂತೆ ಸೂಚನೆ ನೀಡಿದ್ದರು. ಯಾವುದೇ ಸೂಚನೆಗಳಿಗೂ ಮನ್ನಣೆ ನೀಡದೆ ಅಧಿಕಾರಿಗಳು ಭೂಮಿ ಮಂಜೂರು ಮಾಡದೆ ಮೂರು ವರ್ಷಗಳಿಂದ ಅಲೆದಾಡಿಸಿದ್ದರು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ADVERTISEMENT

ಅಂತಿಮವಾಗಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳು ಇವರಿಂದ ಅರ್ಜಿ ಪಡೆದು ತುಮಕೂರಿನ ಮೆಷೀನ್ ಟೂಲ್ ಪಾರ್ಕ್‌ನಲ್ಲಿ ಭೂಮಿ ಮಂಜೂರು ಮಾಡಿದ್ದು, ಗಿರೀಶ್ ಅವರ ಮೂರು ವರ್ಷಗಳ ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ.

‘ವಿಮಾನ ತಯಾರಿಕೆಗೆ ಎಚ್‌ಎಎಲ್‌ಗೆ ಅಗತ್ಯ ಇರುವ ಬಿಡಿ ಭಾಗಗಳನ್ನು ಎಡಿಡಿ ಎಂಜಿನಿಯರಿಂಗ್ ಕಂಪನಿ ಪೂರೈಕೆ ಮಾಡುತ್ತದೆ’ ಎಂದು ಎಲ್.ಗಿರೀಶ್ ತಿಳಿಸಿದರು.

‘ದೇವನಹಳ್ಳಿ ಏರೋಸ್ಪೇಸ್ ಪಾರ್ಕ್‌ನಲ್ಲಿ ರೆಕ್ಕೆ ಜೋಡಣಾ ಬಿಡಿಭಾಗಗಳ ಉತ್ಪಾದನೆ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಜರ್ಮನಿಯ ಜಿಎಂಬಿಎಚ್‌ನ ಅಂಗ ಸಂಸ್ಥೆ ಇದಾಗಿದ್ದು, ಉತ್ಪಾದನಾ ಘಟಕ ಸ್ಥಾಪನೆಗೆ ಒಂದು ಎಕರೆ ಭೂಮಿ ಕೂಡ ದೊರೆತಿದೆ’ ಎಂದು ಅವರು ವಿವರಿಸಿದರು.

‘ಈ ಉತ್ಪಾದನಾ ಘಟಕಕ್ಕೆ ₹10 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. ಸುಮಾರು 200 ಜನರಿಗೆ ಉದ್ಯೋಗ ಕಲ್ಪಿಸಲಾಗುವುದು. ಮುಂದಿನ ಒಂದು ವರ್ಷದಲ್ಲಿ ಉತ್ಪಾದನಾ ಪ್ರಕ್ರಿಯೆ ಆರಂಭಿಸುವ ಉದ್ದೇಶ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.