ADVERTISEMENT

ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ: ಮಹಡಿಯಿಂದ ಬಿದ್ದು ಬಾಲಕಿ ಸಾವು

ಓದಿಕೊಳ್ಳುವಂತೆ ಬುದ್ಧಿವಾದ ಹೇಳಿದ್ದ ತಾಯಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:49 IST
Last Updated 12 ಜುಲೈ 2019, 19:49 IST

ಬೆಂಗಳೂರು: ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯ ‘ಮಹಾವೀರ್ ಕೆಡಾರ್’ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಬಿದ್ದು ಸಮೀಕ್ಷಾ ದೇಶಮುಖ್‌ (14) ಎಂಬಾಕೆ ಮೃತಪಟ್ಟಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿ ವಿಜಯಕುಮಾರ್‌ ಹಾಗೂ ನಿವೇದಿತಾ ದಂಪತಿಯ ಪುತ್ರಿ ಸಮೀಕ್ಷಾ 9ನೇ ತರಗತಿಯಲ್ಲಿ ಓದುತ್ತಿದ್ದಳು.

‘ಗುರುವಾರ ಸಂಜೆ ಶಾಲೆ ಮುಗಿಸಿ ಮನೆಗೆ ಬಂದಿದ್ದ ಬಾಲಕಿ ರಾತ್ರಿ 7.30ರ ಸುಮಾರಿಗೆ ಮಹಡಿಯಿಂದ ಬಿದ್ದಿದ್ದಳು. ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ನೆಲಮಹಡಿಯಲ್ಲಿ ಬಿದ್ದು ನರಳಾಡುತ್ತಿದ್ದ ಸಮೀಕ್ಷಾಳನ್ನು ಸಮೀಪದ ಸಪ್ತಗಿರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ತಡರಾತ್ರಿ ಆಕೆ ಅಸುನೀಗಿದ್ದಾಳೆ’ ಎಂದು ಮಾಹಿತಿ ನೀಡಿದರು.

ಬುದ್ಧಿವಾದ ಹೇಳಿದ್ದ ತಾಯಿ: ‘ಬಾಲಕಿ ಬರೆದಿಟ್ಟಿದ್ದಾಳೆ ಎನ್ನಲಾದ ಮರಣ ಪತ್ರ, ಮನೆಯಲ್ಲಿ ಸಿಕ್ಕಿದೆ. ಅದನ್ನು ಸುಪರ್ದಿಗೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಬಾಲಕಿಯ ತಂದೆ ಖಾಸಗಿ ಕಂಪನಿ ಉದ್ಯೋಗಿ. ತಾಯಿ, ವಿಕಾಸಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಚೆನ್ನಾಗಿ ಓದು ಎಂದು ಮಗಳಿಗೆ ಬುದ್ಧಿವಾದ ಹೇಳುತ್ತಿದ್ದರು. ಅಷ್ಟಕ್ಕೆ ಬಾಲಕಿ ಕೋಪಗೊಂಡಿದ್ದಳು ಎಂಬುದು ಸದ್ಯದ ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.

‘ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿಗಳು ಗುರುವಾರ ರಾತ್ರಿ ಸಣ್ಣದೊಂದು ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗೆ ಹೋಗಲು ಬಾಲಕಿಯ ತಾಯಿ ಸಿದ್ಧರಾಗಿದ್ದರು. ಶಾಲೆಯಿಂದ ಮನೆಗೆ ಬಂದಿದ್ದ ಬಾಲಕಿ, ತಾನೂ ಪಾರ್ಟಿಗೆ ಬರುವುದಾಗಿ ಪಟ್ಟು ಹಿಡಿದಿದ್ದಳು. ಶಾಲೆಯಲ್ಲಿ ನೀಡಿರುವ ಮನೆಪಾಠವನ್ನು ಪೂರ್ಣಗೊಳಿಸಿದ ಬಳಿಕ ಸ್ನೇಹಿತರ ಜೊತೆಯಲ್ಲಿ ಪಾರ್ಟಿಗೆ ಬಾ ಎಂದು ಹೇಳಿ ತಾಯಿ ಹೊರಟು ಹೋಗಿದ್ದರು’

‘ತಾಯಿ ತನ್ನನ್ನು ಬಿಟ್ಟು ಪಾರ್ಟಿಗೆ ಹೋಗಿದ್ದರಿಂದ ಹಾಗೂ ಓದಿಕೊಳ್ಳುವಂತೆ ಪದೇ ಪದೇ ಹೇಳುತ್ತಿದ್ದರಿಂದ ನೊಂದ ಬಾಲಕಿ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿನ ಬಗ್ಗೆ ದೂರು ನೀಡಿರುವ ತಾಯಿ ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ನಂತರವೇ ಸಾವಿನ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದು ಸೋಲದೇವನಹಳ್ಳಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.