ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಲವಲೇಶವಾದರೂ ಮಾನವೀಯತೆ ಇದ್ದರೆ, ಭಯೋತ್ಪಾದಕರ ದಾಳಿಯಿಂದ ಮೃತಪಟ್ಟ ಎರಡೂ ಕುಟುಂಬಕ್ಕೆ ಕನಿಷ್ಠ ₹1 ಕೋಟಿ ಪರಿಹಾರ ಕೊಡಬೇಕಿತ್ತು ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿಸೂರ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ ಅದರ ಬಡ್ಡಿಯಿಂದ ಅವರ ಕುಟುಂಬದ ಮಕ್ಕಳ ಶಿಕ್ಷಣ ನಡೆಯುತ್ತದೆ ಎಂದು ತಿಳಿಸಿದ್ದಾರೆ.
‘ನೆರೆಯ ರಾಜ್ಯದಲ್ಲಿ ಆನೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟವರಿಗೆ ಸರ್ಕಾರ ₹15 ಲಕ್ಷ ಕೊಟ್ಟಿತ್ತು. ಉಗ್ರರ ದಾಳಿಯಲ್ಲಿ ನಮ್ಮ ರಾಜ್ಯದ ಇಬ್ಬರು ಮೃತಪಟ್ಟಿದ್ದು, ಅಷ್ಟು ಮೊತ್ತವಾದರೂ ಕೊಡಬೇಕಿತ್ತು. ಮುಸ್ಲಿಂ ವೋಟಿಗೆ ತಮ್ಮನ್ನು ತಾವು ಮಾರಿಕೊಂಡ ಕಾಂಗ್ರೆಸ್ ಪಕ್ಷದಿಂದ ಇದಕ್ಕಿಂತ ಜಾಸ್ತಿ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ. ಈ ಕುಟುಂಬಗಳಿಗೆ ಶಕ್ತಿಕೊಡುವ ಜವಾಬ್ದಾರಿ ಹಿಂದೂ ಸಮಾಜಕ್ಕೆ ಇದೆ’ ಎಂದರು.
‘ಬಿಜೆಪಿ ವತಿಯಿಂದ ನಾಳೆ ಭರತ್ ಭೂಷಣ್ ಮನೆಗೆ ಹೋಗಿ ₹10 ಲಕ್ಷ ಮತ್ತು ಒಂದೆರಡು ದಿನಗಳಲ್ಲಿ ಮಂಜುನಾಥ್ ಅವರ ಮನೆಗೆ ಹೋಗಿ ₹10 ಲಕ್ಷ ಕೊಡಲಿದ್ದೇವೆ’ ಎಂದರು.
‘ಭಯೋತ್ಪಾದಕರು ಹಿಂದೂಗಳನ್ನು ಧರ್ಮದ ಆಧಾರದಲ್ಲಿ ಕೊಂದಿದ್ದು ಸರಿಯಲ್ಲ ಎಂದು ಅಸಾದುದ್ದೀನ್ ಒವೈಸಿ ಒಪ್ಪಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್‌ನವರು ಮಾತ್ರ ಒಪ್ಪಲು ತಯಾರಿಲ್ಲ. ಎಂತಹ ದರಿದ್ರ, ದೈನೇಸಿ ಸ್ಥಿತಿಗೆ ಕಾಂಗ್ರೆಸ್ ಪಕ್ಷ ಇಳಿದಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ’ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.