ADVERTISEMENT

ಜಿಕೆವಿಕೆ: ನಾಳೆಯಿಂದ ‘ಕೃಷಿ ಮೇಳ’

ಆನ್‌ಲೈನ್‌ ಮತ್ತು ಭೌತಿಕವಾಗಿ ಮೇಳ ವೀಕ್ಷಣೆಗೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 20:33 IST
Last Updated 9 ನವೆಂಬರ್ 2021, 20:33 IST
ಕೃಷಿ ಮೇಳಕ್ಕೆ ಸಿದ್ಧಗೊಂಡಿರುವ ಪ್ರದರ್ಶನ ತಾಕುಗಳನ್ನು ಕುಲಪತಿ ಎಸ್.ರಾಜೇಂದ್ರ ಪ್ರಸಾದ್ ವೀಕ್ಷಿಸಿದರು. ಸಂಶೋಧನಾ ನಿರ್ದೇಶಕ ವೈ.ಜಿ.ಷಡಕ್ಷರಿ, ಪ್ರೊ.ಕೆ.ಶಿವರಾಂ ಹಾಗೂ ಇತರರು ಇದ್ದರು.
ಕೃಷಿ ಮೇಳಕ್ಕೆ ಸಿದ್ಧಗೊಂಡಿರುವ ಪ್ರದರ್ಶನ ತಾಕುಗಳನ್ನು ಕುಲಪತಿ ಎಸ್.ರಾಜೇಂದ್ರ ಪ್ರಸಾದ್ ವೀಕ್ಷಿಸಿದರು. ಸಂಶೋಧನಾ ನಿರ್ದೇಶಕ ವೈ.ಜಿ.ಷಡಕ್ಷರಿ, ಪ್ರೊ.ಕೆ.ಶಿವರಾಂ ಹಾಗೂ ಇತರರು ಇದ್ದರು.   

ಬೆಂಗಳೂರು: ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿ ನೀಡಲು ಹಾಗೂ ಕೃಷಿಯಲ್ಲಿ ಲಾಭದಾಯಕ ವಿಧಾನಗಳನ್ನು ಪರಿಚಯಿಸುವ ಸಲುವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ‘ಕೃಷಿ ಮೇಳ’ ವನ್ನುನವೆಂಬರ್ 11ರಿಂದ 14ರವರೆಗೆ ಆಯೋಜಿಸಿದೆ.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ವಿಶ್ವವಿದ್ಯಾಲಯದ ಕುಲಪತಿಕುಲಪತಿ ಎಸ್.ರಾಜೇಂದ್ರ ಪ್ರಸಾದ್,‘ಕೃಷಿ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ (ನ.11) ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಿದ್ದಾರೆ. ಇದೇ ವೇಳೆ ಕೃಷಿ ಸಾಧಕರಿಗೆ ವಿವಿಧ ಪ್ರಶಸ್ತಿಗಳ ಪ್ರದಾನವೂ ನಡೆಯಲಿದೆ’ ಎಂದರು.

‘ಶಾಸಕ ಕೃಷ್ಣಬೈರೇಗೌಡ ಅವರು ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ, ಸಚಿವರಾದ ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಕಳೆದ ವರ್ಷ ಕೋವಿಡ್ ಕಾರಣದಿಂದ ಮೇಳಕ್ಕೆ ಭೇಟಿ ನೀಡುವವರ ಪ್ರಮಾಣ ಸೀಮಿತಗೊಳಿಸಿ, ಆನ್‌ಲೈನ್‌ ಮೂಲಕ ಮೇಳ ವೀಕ್ಷಣೆಗೆ ಹೆಚ್ಚಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಬಾರಿ ಕೋವಿಡ್‌ ತೀವ್ರತೆ ತಗ್ಗಿರುವುದರಿಂದ ಮೊದಲಿನಂತೆ ಮೇಳ ವೀಕ್ಷಿಸಬಹುದು. ಆದರೆ, ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ದೂರದ ಊರಿನ ರೈತರಿಗಾಗಿ ಆನ್‌ಲೈನ್‌ ಮೂಲಕವೂ ಮೇಳದ ನೇರಪ್ರಸಾರ ಇರಲಿದೆ’ ಎಂದು ವಿವರಿಸಿದರು.

10 ತಳಿಗಳ ಬಿಡುಗಡೆ: ‘ಹೆಚ್ಚು ಇಳುವರಿ ಮತ್ತು ಬೆಂಕಿರೋಗ ನಿರೋಧಕ ಶಕ್ತಿಯುಳ್ಳ ಭತ್ತದ ಎರಡು ತಳಿಗಳು, ಬುಡಕೊಳೆ ರೋಗ ನಿರೋಧಕತೆ ಹೊಂದಿರುವ ರಾಗಿ, ತುಕ್ಕು ಮತ್ತು ಎಲೆ ಅಂಗಮಾರಿ ರೋಗಗಳಿಂದ ಪಾರಾಗಬಲ್ಲ ನವಣೆ, ಕಂದು ಚುಕ್ಕೆ ರೋಗ ತಡೆಯಬಲ್ಲ ಸಾಮೆ ಮತ್ತು ಬರಗು ತಳಿಗಳು, ಹೂ ಗೊಂಚಲು ಗೋಳಾಕಾರದಿಂದ ಕೂಡಿರುವ ಬೀಜದ ದಂಟು, ಸ್ವಯಂ ಗರಿ ಕಳಚುವ ಹಾಗೂ ಬೆಲ್ಲ ತಯಾರಿಗೆ ಯೋಗ್ಯವಾದ ಕಬ್ಬು, ಉತ್ತಮ ಮೇವಿನ ಜೀರ್ಣತೆ ಗುಣಗಳನ್ನು ಹೊಂದಿರುವ ಮೇವಿನ ತೋಕೆ ಹೆಸರಿನ ಗೋಧಿ, ಕಡಿಮೆ ಅಂಟು ಪ್ರಮಾಣ ಮತ್ತು ಹೆಚ್ಚು ಸಕ್ಕರೆ ಅಂಶ ಹೊಂದಿರುವ ‘ಬೈರಚಂದ್ರ’ ಹೆಸರಿನ ಹಲಸು ಸೇರಿದಂತೆ ಈ ಬಾರಿ 10 ಹೊಸ ತಳಿಗಳನ್ನು ಹೊರತರಲಾಗಿದೆ. ಮೇಳದಲ್ಲಿ ಈ ತಳಿಗಳ ಪ್ರಾತ್ಯಕ್ಷಿಕೆಗಳು ಸಿದ್ಧಗೊಂಡಿವೆ. ರೈತರು ನೇರವಾಗಿ ತೋಟಗಳಲ್ಲೇ ಹೊಸ ತಳಿಗಳ ಮಾಹಿತಿ ಪಡೆಯುವ ವ್ಯವಸ್ಥೆಯನ್ನೂ ಮಾಡಿದ್ದೇವೆ’ ಎಂದು ರಾಜೇಂದ್ರ ಪ್ರಸಾದ್‌ ಹೇಳಿದರು.

ರೈತರಿಗಾಗಿ ಚರ್ಚಾಗೋಷ್ಠಿ:ನ.12ರಿಂದ 14ರವರೆಗೆ ಪ್ರತಿದಿನ ಬೆಳಿಗ್ಗೆ 10.30ರಿಂದ 12.30ರವರೆಗೆ ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿಗಳು ನಡೆಯಲಿವೆ. ಕೃಷಿ ಸಂಬಂಧಿತ ಪ್ರಶ್ನೆಗಳಿಗೆಕೃಷಿ ತಜ್ಞರು ಹಾಗೂ ವಿಜ್ಞಾನಿಗಳ ತಂಡ ಭೌತಿಕವಾಗಿ ಮತ್ತು ಜೂಮ್ ಸಭೆ ಮೂಲಕ ಪರಿಹಾರ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.