
ಡಾ.ಎಚ್.ಎಸ್. ನಟರಾಜ್ ಶೆಟ್ಟಿ
ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ.ಎಚ್.ಎಸ್. ನಟರಾಜ್ ಶೆಟ್ಟಿ ಅವರ ‘ಎಚ್‌ಐವಿ ಪೀಡಿತರಲ್ಲಿ ಹೃದಯದ ಸಮಸ್ಯೆ’ ಸಂಶೋಧನಾ ಪ್ರಬಂಧವು ‘ಜರ್ನಲ್ ಆಫ್ ದಿ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ’ಯಲ್ಲಿ ಪ್ರಕಟವಾಗಿದೆ.
ಈ ಮೂಲಕ ಅವರು ಜಾಗತಿಕ ಮನ್ನಣೆ ಪಡೆದಿದ್ದಾರೆ. ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಇತ್ತೀಚೆಗೆ ನಡೆದ
‘ಟ್ರಾನ್ಸ್‌ಕ್ಯಾಥೆಟರ್ ಕಾರ್ಡಿಯೋವಾಸ್ಕುಲರ್ ಥೆರಪ್ಯೂಟಿಕ್ಸ್’ (ಟಿಸಿಟಿ) ಸಮ್ಮೇಳನದಲ್ಲಿ ಅವರು ಈ ಪ್ರಬಂಧ ಮಂಡಿಸಿದರು.
‘ಎಚ್‌ಐವಿ ಪೀಡಿತರಲ್ಲಿ ಹೃದಯ ರಕ್ತನಾಳದ ಅಪಾಯದ ಬಗ್ಗೆ ಈ ಸಂಶೋಧನಾ ಪ್ರಬಂಧ ತಿಳಿಸಲಿದೆ. ಆರಂಭಿಕ ಹಂತದಲ್ಲಿ ಅಪಾಯ ಗುರುತಿಸುವಿಕೆ, ತಡೆಗಟ್ಟುವಿಕೆ ಹಾಗೂ ಸಮಗ್ರ ನಿರ್ವಹಣಾ ತಂತ್ರಗಳನ್ನು ಕೇಂದ್ರೀಕೃತವಾಗಿಸಿಕೊಂಡಿದೆ’ ಎಂದು ಡಾ. ನಟರಾಜ್ ಶೆಟ್ಟಿ ಹೇಳಿದ್ದಾರೆ.
‘ಡಾ. ನಟರಾಜ್ ಶೆಟ್ಟಿ ಅವರು ಕಳೆದ ಹತ್ತು ವರ್ಷಗಳಲ್ಲಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದ ಎಚ್‌ಐವಿ ಸೋಂಕಿತ 910 ರೋಗಿಗಳನ್ನು ಸಂಶೋಧನೆಗೆ ಒಳಪಡಿಸಿ, ಸಂಶೋಧನಾ ಪ್ರಬಂಧ ರಚಿಸಿದ್ದರು. ಈ ಪ್ರಬಂಧ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಚರ್ಚೆ ಆಗಿರುವುದು ಸಂಸ್ಥೆಯ ಗರಿಮೆ ಹೆಚ್ಚಿಸಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.