ADVERTISEMENT

ತಮಿಳುನಾಡಿಗೆ ಗೋದಾವರಿ ಸಲ್ಲ; ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ

ಗಂಗ ಸಾಮ್ರಾಟ ಶ್ರೀಪುರುಷ ಪ್ರಶಸ್ತಿ ಸ್ವೀಕರಿಸಿದ ಎಚ್‌.ಡಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 15:52 IST
Last Updated 22 ಜೂನ್ 2025, 15:52 IST
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡಗೆ ‘ಗಂಗ ಸಾಮ್ರಾಟ ಶ್ರೀಪುರುಷ’ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಪ್ರಜಾವಾಣಿ ಚಿತ್ರ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡಗೆ ‘ಗಂಗ ಸಾಮ್ರಾಟ ಶ್ರೀಪುರುಷ’ ಪ್ರಶಸ್ತಿ ನೀಡಿ ಗೌರವಿಸಲಾಯಿತು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗೋದಾವರಿಯ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಿದರೆ ಕುಡಿಯುವ ನೀರಿಗೂ ತೊಂದರೆ ಇರುವ ಕರ್ನಾಟಕಕ್ಕೆ ಅನ್ಯಾಯವಾಗಲಿದೆ. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಈ ಸಮಸ್ಯೆಯನ್ನು ಇತ್ಯರ್ಥ ಮಾಡುವ ಶಕ್ತಿ ನರೇಂದ್ರ ಮೋದಿಗಷ್ಟೇ ಇದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ತಿಳಿಸಿದರು.

ಎಚ್‌.ಡಿ. ದೇವೇಗೌಡ ಅಭಿನಂದನಾ ಸಮಿತಿ ವತಿಯಿಂದ ಭಾನುವಾರ ‘ಗಂಗ ಸಾಮ್ರಾಟ ಶ್ರೀಪುರುಷ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

‘ಚಳ್ಳಕೆರೆ, ಮಧುಗಿರಿ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಸಹಿತ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ನನಗೆ ಏನೂ ಆಗಬೇಕಿಲ್ಲ. ಆದರೆ, ಈ ನಾಡಿನ ಜನರು ಬವಣೆ ಪಡಬಾರದು’ ಎಂದು ಹೇಳಿದರು.

ADVERTISEMENT

‘ಎಲ್ಲರೂ ಈ ವಿಚಾರದಲ್ಲಿ ಧ್ವನಿ ಎತ್ತಬೇಕು. ಎಲ್ಲ ಕಡೆ ನೀರಿನ ಬಗ್ಗೆ ಚರ್ಚೆಗಳಾಗಬೇಕು. ಸಂಸತ್ತಿನಲ್ಲಿ ನಾನು ಹೋರಾಟ ಮಾಡುತ್ತೇನೆ’ ಎಂದು ತಿಳಿಸಿದರು.

‘ಏಳು ದಶಕಗಳ ರಾಜಕೀಯದಲ್ಲಿ ಯಾವುದೋ ಒಂದು ಸಮುದಾಯ ನನ್ನನ್ನು ಬೆಳೆಸಿದ್ದಲ್ಲ. ಎಲ್ಲ ಸಮುದಾಯಗಳು ಸೇರಿ ಬೆಳೆಸಿವೆ. ಎಲ್ಲ ಜನರ ಋಣ ನನ್ನ ಮೇಲಿದೆ. 16 ಸಂಸದರನ್ನು ಜನರು ಆಯ್ಕೆ ಮಾಡದೇ ಹೋಗಿದ್ದರೆ ನಾನೆಲ್ಲಿ ಪ್ರಧಾನಿಯಾಗುತ್ತಿದ್ದೆ. ಜನರಿಗಾಗಿ ಕೆಲಸ ಮಾಡಿದೆ’ ಎಂದರು.

ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ದೇವೇಗೌಡರು ದೊಡ್ಡ ಆಲದಮರ. ರಾಜಕಾರಣಿಯಾಗಿ ಅವರು ಬೆಳೆದ ಎತ್ತರ ಬಹಳ ದೊಡ್ಡದು. ಅದರ ಆಳ, ಅಗಲ, ಹರವು ನಮಗೆ ನಿಲುಕದು. ಭಕ್ತಿ, ಶ್ರದ್ಧೆ ಮತ್ತು ಒಳನೋಟದಿಂದ ಮಾಡುವ ಕೆಲಸಗಳೇ ಅವರ ಶಕ್ತಿ’ ಎಂದು ತಿಳಿಸಿದರು.

ಲೇಖಕ ಸುಗತ ಶ್ರೀನಿವಾಸರಾಜು ಅಭಿನಂದನಾ ನುಡಿಗಳನ್ನಾಡಿ, ‘ಯಾರ ಮುಲಾಜಿಗೂ ಸಿಗದ ರಾಜಕಾರಣಿಯಾಗಿರುವ ದೇವೇಗೌಡರು ಪ್ರಜಾಪ್ರಭುತ್ವದ ಶ್ರೀಪುರುಷ, ಪ್ರಜಾಪ್ರಭುತ್ವದ ಪುರುಷೋತ್ತಮ. ದೇಶದ ಮೂಲೆ ಮೂಲೆಗಳಿಗೆ ತಲುಪಿದ ಕರ್ನಾಟಕದ ಏಕೈಕ ರಾಜಕಾರಣಿ ಅವರು. ಅಧ್ಯಯನ, ರಾಜಕಾರಣ, ಅಭಿವೃದ್ಧಿ..ಈ ಮೂರನ್ನೇ ದೇವೇಗೌಡರು ಜೀವನಪೂರ್ತಿ ಮಾಡಿಕೊಂಡು ಬಂದವರು’ ಎಂದು ತಿಳಿಸಿದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾದ ಸಿದ್ಧಲಿಂಗ ಸ್ವಾಮೀಜಿ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಸ್ಪಟಿಕಪುರಿಯ ನಂಜಾವಧೂತ ಸ್ವಾಮೀಜಿ, ತುಮಕೂರು ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ, ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಸಂಸ್ಥಾನಮಠದ ನಿಶ್ಚಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಅಭಿನಂದನಾ ಸಮಿತಿಯ ಅಧ್ಯಕ್ಷ ಅ. ದೇವೇಗೌಡ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳ 93 ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ‘ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ ಅವರ ಬದುಕು ಮತ್ತು ಸಾಧನೆ’ ಪುಸ್ತಕ ಬಿಡುಗಡೆ ಮಾಡಲಾಯಿತು.

‘ನನ್ನ ಕಾಲು ನೋಯುತ್ತಿರಬಹುದು ತಲೆಯಲ್ಲ’

‘ಜೀವನದ ಕೊನೆಯ ಹಂತದಲ್ಲಿ ನಾನಿದ್ದೇನೆ. ಕಾಲಿಗೆ ನೋವಾಗಿರಬಹುದು. ಆದರೆ ತಲೆ ಇನ್ನೂ ಚುರುಕಾಗಿದೆ’ ಎಂದು ಎಚ್‌.ಡಿ. ದೇವೇಗೌಡ ಮಾನಸಿಕವಾಗಿ ಆರೋಗ್ಯವಾಗಿರುವುದನ್ನು ತಿಳಿಸಿದರು. ‘ಈ ಇಳಿ ವಯಸ್ಸಿನಲ್ಲಿ ಸನ್ಮಾನ ಮಾಡಿರುವುದು ಸಮಾಧಾನ ತಂದಿದೆ’ ಎಂದು ಕೃತಜ್ಞರಾದರು. ‘ನನ್ನ ತಂದೆಗೆ ನಾಲ್ಕು ಎಕರೆ ಜಮೀನು ಇತ್ತು. ಸಣ್ಣ ಕೃಷಿಕ ಕುಟುಂಬ ನಮ್ಮದು. ತಂದೆಯ ಮೊದಲ ಪತ್ನಿಗೆ ಮೂವರು ಗಂಡು ಮಕ್ಕಳಾದರೂ ಉಳಿಯಲಿಲ್ಲ. ಕೊನೆಗೆ ಮೊದಲ ಪತ್ನಿಯೂ ಮೃತಪಟ್ಟರು. ಎರಡನೇ ಪತ್ನಿಯೇ ನನ್ನ ತಾಯಿ. ಸೋಮವಾರ ಈಶ್ವರನ ದೇವಸ್ಥಾನಕ್ಕೆ ಶನಿವಾರ ಆಂಜನೇಯನ ದೇವಸ್ಥಾನಕ್ಕೆ ಹೋಗಿ ನಮಗೊಂದು ಮಗುವನ್ನು ಕರುಣಿಸು ಎಂದು ಯಾವಾಗಲೂ ಪ್ರಾರ್ಥನೆ ಮಾಡುತ್ತಿದ್ದರು. ಹಾಗೆ ಹುಟ್ಟಿದವನು ನಾನು. ತಾಯಿ ಎಂಥ ಹಾಲನ್ನು ಕುಡಿಸಿದಳೋ? 93 ವರ್ಷ ಬದುಕಿದ್ದೇನೆ’ ಎಂದು ಹೆತ್ತವರನ್ನು ಸ್ಮರಿಸಿಕೊಂಡರು. ‘ನನಗೆ ಬೆಂಬಲವಾಗಿ ಬೆನ್ನೆಲುಬಾಗಿ ಚೆನ್ನಮ್ಮ ನಿಂತರು. ಕಷ್ಟ ಕಾಲದಲ್ಲಿ ನಮ್ಮ ಮನೆಯ ಗೌರವ ಕಾಪಾಡಿದರು. ನನ್ನ ಬೆಳವಣಿಗೆಯಲ್ಲಿ ದೊಡ್ಡ ಕೊಡುಗೆಯನ್ನು ಚೆನ್ನಮ್ಮ ನೀಡಿದರು’ ಎಂದು ಪತ್ನಿಗೆ ಕೃತಜ್ಞತೆ ಸಲ್ಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.