ADVERTISEMENT

ಗೋಡ್ಸೆ ದೇಶದ ಮೊದಲ ಭಯೋತ್ಪಾದಕ: ಬಿ.ಕೆ. ಹರಿಪ್ರಸಾದ್

ಗಾಂಧಿ ಹತ್ಯೆಗೆ ಸಂಘ ಪರಿವಾರದ ಪಿತೂರಿ *ಕೆಪಿಸಿಸಿ ಕಚೇರಿಯಲ್ಲಿ ಹುತಾತ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 16:20 IST
Last Updated 30 ಜನವರಿ 2022, 16:20 IST
ಬಿ.ಕೆ. ಹರಿಪ್ರಸಾದ್‌
ಬಿ.ಕೆ. ಹರಿಪ್ರಸಾದ್‌   

ಬೆಂಗಳೂರು: ಮಹಾತ್ಮ ಗಾಂಧೀಜಿಯವರನ್ನು ಕೊಲೆ ಮಾಡಿದ ನಾಥೂರಾಮ್‌ ಗೋಡ್ಸೆ ದೇಶದ ಮೊದಲ ಭಯೋತ್ಪಾದಕ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಹೇಳಿದರು.

ಹುತಾತ್ಮರ ದಿನದ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ‘ಗಾಂಧೀಜಿಯವರ ಪ್ರಗತಿಪರ ಚಿಂತನೆಗಳನ್ನು ಸಹಿಸದ ಸಂಘ ಪರಿವಾರವು ಪಿತೂರಿ ನಡೆಸಿ ಗೋಡ್ಸೆಯ ಮೂಲಕ ಅವರನ್ನು ಹತ್ಯೆ ಮಾಡಿಸಿತು. ಆತ ಈ ದೇಶದ ಮೊದಲ ಉಗ್ರಗಾಮಿ ಮತ್ತು ರಾಷ್ಟ್ರದ್ರೋಹಿ’ ಎಂದರು.

ಗಾಂಧೀಜಿಯವರು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ತತ್ವಗಳನ್ನು ಪ್ರತಿಪಾದಿಸುತ್ತಿದ್ದರು. ಸಂಘ ಪರಿವಾರ ಈ ತತ್ವಗಳಿಗೆ ವಿರುದ್ಧವಾಗಿದೆ. ಪ್ರಗತಿಪರ ಚಿಂತನೆ ಮತ್ತು ಸಾಮಾಜಿಕ ನ್ಯಾಯದ ವಿರೋಧಿಯಾದ ಸಂಘ ಪರಿವಾರಕ್ಕೆ ಗಾಂಧೀಜಿ ವಿರುದ್ಧ ದ್ವೇಷವಿತ್ತು. ದೇಶ ವಿಭಜನೆಯ ಕಾರಣಕ್ಕಾಗಿ ಗಾಂಧಿ ಹತ್ಯೆ ನಡೆದಿಲ್ಲ. ಅವರ ಚಿಂತನೆಗಳ ಕಾರಣಕ್ಕಾಗಿ ನಡೆದಿದೆ ಎಂದು ಹೇಳಿದರು.

ADVERTISEMENT

‘ಮಹಾತ್ಮ ಗಾಂಧಿಗಿಂತ ದೊಡ್ಡ ಹಿಂದೂ ಪ್ರಪಂಚದಲ್ಲಿ ಯಾರೂ ಇಲ್ಲ. ಅವರನ್ನು ಕೊಂದವರು ಮುಸ್ಲಿಂ, ಕ್ರೈಸ್ತ, ಅಥವಾ ಸಿಖ್‌ ವ್ಯಕ್ತಿಗಳಲ್ಲ. ಗಾಂಧಿಯನ್ನು ಕೊಂದಿರುವುದು ಒಬ್ಬ ಹಿಂದೂ ಭಯೋತ್ಪಾದಕ. ಇವರಿಗೆ ಹಿಂದೂಗಳ ಮೇಲೆ ಅಷ್ಟು ಪ್ರೀತಿ ಇದ್ದಿದ್ದರೆ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಕೊಲೆ ಮಾಡಬೇಕಿತ್ತು. ಅದನ್ನು ಮಾಡಲಿಲ್ಲ. ಈ ರಾಷ್ಟ್ರದಲ್ಲಿ ಹಿಂದೂ ಧರ್ಮವನ್ನೇ ಪರಿಪಾಲನೆ ಮಾಡುವವರನ್ನು ಕೊಲೆ ಮಾಡುವ ಸಂಪ್ರದಾಯ ಹಾಕಿಕೊಟ್ಟವರು ಸಂಘ ಪರಿವಾರದ ಸದಸ್ಯರು’ ಎಂದು ಹರಿಪ್ರಸಾದ್‌ ವಾಗ್ದಾಳಿ ನಡೆಸಿದರು.

ಮತಾಂಧ ಶಕ್ತಿಗಳು ಗೋಡ್ಸೆಯನ್ನು ಆರಾಧಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಈವರೆಗೂ ಈ ವಿಚಾರದಲ್ಲಿ ಯಾವುದೇ ಮಾತನಾಡದೆ ಇರುವುದು ಮತ್ತು ಗಾಂಧಿಯನ್ನು ಕೊಂದವನ ವಿಜೃಂಭಣೆ ಸಲ್ಲದು ಎಂದು ಹೇಳದೇ ಇರುವುದು ದುರ್ದೈವ ಎಂದರು.

ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಮತಾಂಧತೆಯ ವಿರುದ್ಧ ನಿಂತು ಮನುಕುಲದ ಒಳಿತಿಗಾಗಿ ಶ್ರಮಿಸುತ್ತಿದ್ದ ಗಾಂಧಿಯನ್ನು ಮತಾಂಧನೊಬ್ಬ ಕೊಂದ. ಗಾಂಧೀಜಿ ಅವರನ್ನು ಕೊಂದಿರಬಹುದು, ಅವರ ವಿಚಾರಗಳನ್ನು ಕೊಲ್ಲಲು ಯಾರಿಗೂ ಸಾಧ್ಯವಿಲ್ಲ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ಜಗತ್ತಿಗೆ ಶಾಂತಿಯುತ ಮತ್ತು ಅಹಿಂಸಾತ್ಮಕ ಹೋರಾಟದ ಮಾರ್ಗವನ್ನು ಪರಿಚಯಿಸಿದವರು ಗಾಂಧಿ. ರಾಜಕೀಯವಾಗಿ ಯಾರು ಏನೇ ಮಾಡಬಹುದು. ಆದರೆ, ಗಾಂಧೀಜಿಯವರ ತತ್ವ ಮತ್ತು ಚಿಂತನೆಗಳನ್ನು ಅಳಿಸಿಹಾಕಲು ಯಾರಿಗೂ ಸಾಧ್ಯವಿಲ್ಲ’ ಎಂದರು.

ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಕಾಂಗ್ರೆಸ್‌ ಮುಖಂಡರಾದ ಎಚ್‌. ಆಂಜನೇಯ, ವಿ.ಎಸ್‌. ಉಗ್ರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.