ADVERTISEMENT

‘ಗಾಂಧಿ ತತ್ವದ ಮೂಲಕ ಗೋಡ್ಸೆಯ ಮಾರಕ ಸಿದ್ಧಾಂತ ಹತ್ತಿಕ್ಕಬೇಕು’

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 19:03 IST
Last Updated 30 ಜನವರಿ 2022, 19:03 IST

ಬೆಂಗಳೂರು: ‘ಗಾಂಧಿಯನ್ನು ಕೊಂದ ಶಕ್ತಿಗಳೇ ಗೌರಿ ಲಂಕೇಶ್‌, ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡಿವೆ. ಪ್ರಸ್ತುತ ಸನ್ನಿವೇಶದಲ್ಲಿ ಗಾಂಧಿಯ ಸರಳತೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಗೋಡ್ಸೆಯ ಮಾರಕ ಸಿದ್ಧಾಂತ ಹತ್ತಿಕ್ಕಬೇಕು’ ಎಂದು ಪತ್ರಕರ್ತಪಾರ್ವತೀಶ್ ಬಿಳಿದಾಳೆ ಹೇಳಿದರು.

ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ರಾಜ್ಯ ಸಮಿತಿಯು ಗಾಂಧೀಜಿ ಹುತಾತ್ಮರಾದ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ‘ಗಾಂಧಿಯನ್ನು ಕೊಂದ ಆರ್‌ಎಸ್‌ಎಸ್‌’ ಕುರಿತ ವಿಚಾರ ಸಂಕಿರಣದಲ್ಲಿ ಭಾನುವಾರ ಅವರು ಮಾತನಾಡಿದರು.

‘ಜಗತ್ತಿನ ಅತ್ಯಂತ ದೊಡ್ಡ ಸಾಮ್ರಾಜ್ಯಶಾಹಿ ಶಕ್ತಿಯ ವಿರುದ್ಧ ನಿರಾಯುಧರಾಗಿ ಹೋರಾಡಿದವರು ಗಾಂಧೀಜಿ. ಇಚ್ಛಾಶಕ್ತಿ ಹಾಗೂ ಆತ್ಮಶುದ್ಧಿಯ ಮೂಲಕ ಭಾರತದ ಕೋಟ್ಯಂತರ ಜನರನ್ನು ಹುರಿದುಂಬಿಸಿದ ಅವರು ಬ್ರಿಟಿಷ್‌ ಸಾಮ್ರಾಜ್ಯವನ್ನೇ ಮಣಿಸಿದ್ದರು. ಹೀಗಾಗಿ ಆರ್‌ಎಸ್‌ಎಸ್‌ಗೂ ಗಾಂಧಿಯ ಬಗ್ಗೆ ಭಯವಿತ್ತು’ ಎಂದು ಹೇಳಿದರು.

ADVERTISEMENT

ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ಅಥಾವುಲ್ಲ ಪೂಂಜಾಲಕಟ್ಟೆ, ‘ಗೋಡ್ಸೆ ಪಸರಿಸಿದ ಸಿದ್ಧಾಂತವನ್ನೇ ರಾಷ್ಟ್ರೀಯತೆ ಎಂದು ಬಿಂಬಿಸುವ ಮೂಲಕ ಗಾಂಧಿ, ದಾಭೋಲ್ಕರ್‌, ಪನ್ಸಾರೆ ಹೀಗೆ ಹಲವು ಪ್ರಗತಿಪರ ಚಿಂತಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಇಂತಹ ಉಗ್ರ ಹಿಂದುತ್ವ ಸಿದ್ಧಾಂತವನ್ನು ಸೋಲಿಸುವುದು ಜಾತ್ಯತೀತ ಆಶಯದಲ್ಲಿ ನಂಬಿಕೆ ಇಟ್ಟ ಪ್ರತಿಯೊಬ್ಬ ಭಾರತೀಯ ನಾಗರಿಕನ ಜವಾಬ್ದಾರಿ’ ಎಂದು ಹೇಳಿದರು.

ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶ್ವಾನ್‌ ಸಾದಿಕ್‌, ‘ಆರ್‌ಎಸ್‌ಎಸ್‌ನವರು ಬಹಿರಂಗವಾಗಿಯೇ ಗಾಂಧಿಯನ್ನು ದ್ವೇಷಿಸುತ್ತಾರೆ. ಗೋಡ್ಸೆಯನ್ನು ಆರಾಧಿಸುತ್ತಾರೆ. ಈ ಬೆಳವಣಿಗೆಯು ಕೋಮುದ್ವೇಷಕ್ಕೆ ಕಾರಣವಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.