ADVERTISEMENT

ನಾಲ್ವರ ಬಂಧನ: ಪಿಸ್ತೂಲ್, ಗುಂಡು ವಶ

ಗುಂಡು ಹಾರಿಸಿ ಆಭರಣ ದರೋಡೆಗೆ ಯತ್ನ l ಮಿಂಚಿನ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 19:49 IST
Last Updated 22 ಆಗಸ್ಟ್ 2019, 19:49 IST
ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್‌, ಪಿಸ್ತೂಲ್‌
ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್‌, ಪಿಸ್ತೂಲ್‌   

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಚಿನ್ನದ ಮಳಿಗೆಗೆ ನುಗ್ಗಿ ಗುಂಡು ಹಾರಿಸಿ ದರೋಡೆಗೆ ಯತ್ನಿಸಿ ಪರಾರಿಯಾಗಿದ್ದ ನಾಲ್ವರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದ ಸೊಲ್ಹಾಪುರದ ನಿವಾಸಿ ಬಾಲಾಜಿ ರಮೇಶ ಗಾಯಕವಾಡ (25), ಹರಿಯಾಣದ ಬಲವಾನ್‍ಸಿಂಗ್ (24), ರಾಜಸ್ಥಾನದ ಶ್ರೀರಾಮ ಬಿಸ್ನೋಯಿ (23) ಮತ್ತು ಓಂ ಪ್ರಕಾಶ್ (27) ಬಂಧಿತ‌ರು. ಆರೋಪಿಗಳಿಂದ ನಾಡ ಪಿಸ್ತೂಲ್, ಗುಂಡುಗಳು, ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗುರುವಾರ ಮಾಧ್ಯಮಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಪೊಲೀಸ್‌ ಕಮಿಷನರ್‌ ಭಾಸ್ಕರ್‌ರಾವ್‌, ‘ಚಿನ್ನದ ಮಳಿಗೆಯ ಮಾಲೀಕ ಆಶಿಷ್‌ ಮತ್ತು ಅವರ ಪತ್ನಿ ರಾಕಿ ನೀಡಿದ ಮಾಹಿತಿ ಆಧರಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ’ ಎಂದರು.

ADVERTISEMENT

‘ಬಾಲಾಜಿ ಬೆಳ್ಳಿ ಆಭರಣ ಕೆಲಸ ಮಾಡಿಕೊಂಡಿದ್ದರೆ, ಬಲವಾನ್‍ ಸಿಂಗ್ ನಿರುದ್ಯೋಗಿ. ಶ್ರೀರಾಮ ಬಿಸ್ನೋಯಿ ಮತ್ತು ಓಂಪ್ರಕಾಶ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಕೆ.ಆರ್. ಪುರದಲ್ಲಿರುವ ಕೊಠಡಿಯೊಂದರಲ್ಲಿ ಎಲ್ಲರೂ ವಾಸವಾಗಿದ್ದರು. ಈ ಪೈಕಿ, ಬಾಲಾಜಿ ಮಹಾರಾಷ್ಟ್ರದಲ್ಲಿ ಕಳವು ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಮಾಹಿತಿ ಇದೆ. ಉಳಿದವರು ಮೊದಲ ಬಾರಿಗೆ ಕೃತ್ಯ ನಡೆಸಿರುವುದು ಗೊತ್ತಾಗಿದೆ’.

‘ಶ್ರೀರಾಮ ಬಿಸ್ನೋಯಿ ಮತ್ತು ಓಂಪ್ರಕಾಶ್ ಮೂರು ವರ್ಷಗಳಿಂದ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಚಿನ್ನಾಭರಣ ಅಂಗಡಿಗೆ ನುಗ್ಗಿ ದರೋಡೆ ನಡೆಸಲು ಯೋಜನೆ ಹಾಕಿಕೊಂಡಿದ್ದರು. ಅವರಿಗೆ ಒಂದೂವರೆ ತಿಂಗಳ ಹಿಂದೆ ಬಾಲಾಜಿ ಮತ್ತು ಬಲವಾನ್‍ ಸಿಂಗ್ ಪರಿಚಯವಾಗಿದ್ದರು. ಅವರನ್ನೂ ತಮ್ಮ ಮನೆಯಲ್ಲೇ ಇಟ್ಟುಕೊಂಡು ಸಂಚು ರೂಪಿಸಿದ್ದರು. ಬಾಲಾಜಿ ಬಳಿಯಲ್ಲಿ ಇದ್ದ ಪಿಸ್ತೂಲ್‌ನ್ನು ಕೃತ್ಯಕ್ಕೆ ಬಳಸಲಾಗಿದೆ’ ಎಂದು ಕಮಿಷನರ್‌ ವಿವರಿಸಿದರು.

‘ಚಿನ್ನದ ಮಳಿಗೆಯಲ್ಲಿ ಆರೋಪಿಗಳು ಬಿಟ್ಟು ಹೋಗಿದ್ದ ಹೆಲ್ಮೆಟ್‌ನಲ್ಲಿ ಕೂದಲು ಮತ್ತು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳು ಆರೋಪಿಗಳ ಶೀಘ್ರ ಪತ್ತೆಗೆ ನೆರವಾಗಿವೆ. ಆರೋಪಿಗಳು ಇತರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದೂ ಅವರು ತಿಳಿಸಿದರು.

ಬುಧವಾರ ಮಧ್ಯಾಹ್ನ 2.40ರ ಸುಮಾರಿಗೆ ಪ್ಯಾಲೇಸ್‌ ಗುಟ್ಟಹಳ್ಳಿಯಲ್ಲಿರುವ ಸಾಮ್ರಾಟ್ ಜ್ಯುವೆಲ್ಸ್ ಅಂಗಡಿಗೆ ಕಪ್ಪು ಬಣ್ಣದ ಪಲ್ಸರ್ ಬೈಕ್‍ನಲ್ಲಿ ಬಂದಿದ್ದ ಮೂವರು, ಚಿನ್ನ ಸರ ಖರೀದಿಸುವ ನೆಪದಲ್ಲಿ ಒಳಗೆ ಹೋಗಿದ್ದಾರೆ. ಒಬ್ಬಾತ ಅಂಗಡಿ ಮಾಲೀಕರಾದ ಆಶಿಷ್‌ ಅವರಿಗೆ ಸರ ತೋರಿಸುವಂತೆ ಹೇಳಿದ್ದಾನೆ.

ಆಶಿಷ್‌ ಅವರು ಆಭರಣ ತೆಗೆಯುತ್ತಿದ್ದಂತೆ ಮತ್ತೊಬ್ಬ ಏಕಾಏಕಿ ಪಿಸ್ತೂಲಿನಿಂದ ಗುಂಡು ಹಾರಿಸಿದ್ದು, ಗುಂಡು ಮಳಿಗೆಯ ಚಾವಣಿಗೆ ತಗುಲಿದೆ. ತಕ್ಷಣ ಆಶಿಶ್ ಅವರ ಪತ್ನಿ ರಾಖಿ ತಾನು ಕುಳಿತಿದ್ದ ಕುರ್ಚಿಯನ್ನು ದರೋಡೆಕೋರರತ್ತ ಎಸೆದು ಜೋರಾಗಿ ಕೂಗಿದಾಗ ದರೋಡೆಕೋರರು ಪರಾರಿಯಾಗಿದ್ದರು.

ಮೂರು ತಂಡಗಳ ರಚನೆ: ಆರೋಪಿಗಳ ಪತ್ತೆಗಾಗಿ ವೈಯಾಲಿಕಾವಲ್‌ ಇನ್‌ಸ್ಪೆಕ್ಟರ್‌ ಯೋಗೇಂದ್ರಕುಮಾರ್, ಸದಾಶಿವನಗರ ಠಾಣೆಯ ಇನ್‌ಸ್ಪೆಕ್ಟರ್ ನವೀನ್ ಸುಪೇಕರ್ ಮತ್ತು ಶೇಷಾದ್ರಿಪುರ ಠಾಣೆ ಇನ್‌ಸ್ಪೆಕ್ಟರ್ ಸಂಜೀವ್‍ಗೌಡ ಅವರನ್ನು ಒಳಗೊಂಡ ಮೂರು ತಂಡಗಳನ್ನು ಶೇಷಾದ್ರಿಪುರ ಉಪವಿಭಾಗದ ಎಸಿಪಿ ನಿರಂಜನ್ ರಾಜೇ ಅರಸ್ ನೇತೃತ್ವದಲ್ಲಿ ರಚಿಸಲಾಗಿತ್ತು.

ದಂಪತಿಗೆ ಪ್ರಶಸ್ತಿ ನೀಡಲು ಪ್ರಸ್ತಾವ

‘ದರೋಡೆಕೋರರನ್ನು ಧೈರ್ಯ ಹಾಗೂ ಸಮಯಪ್ರಜ್ಞೆಯಿಂದ ಹಿಮ್ಮೆಟ್ಟಿಸಿದ ಆಶಿಷ್‌ – ರಾಖಿ ದಂಪತಿಗೆ ಪ್ರಶಸ್ತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದೂ ಕಮಿಷನರ್‌ ಭಾಸ್ಕರ್ ರಾವ್‌ ಹೇಳಿದರು.

₹ 1 ಲಕ್ಷ ಬಹುಮಾನ: ‘ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆ ಶ್ಲಾಘನೀಯ. ತನಿಖಾ ತಂಡಕ್ಕೆ ₹ 1 ಲಕ್ಷ ಬಹುಮಾನ ನೀಡಲಾಗುವುದು’ ಎಂದೂ ಅವರು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.