ಬೆಂಗಳೂರು: ಚಿನ್ನ ಕಳ್ಳಸಾಗಣೆ ಆರೋಪದ ಪ್ರಕರಣದಲ್ಲಿ ನಟಿ ರನ್ಯಾ ಅವರ ಆಸ್ತಿ ಜಪ್ತಿಗಾಗಿ ಹೊರಡಿಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಆದೇಶಕ್ಕೆ ಹೈಕೋರ್ಟ್ ಮುಂದಿನ ವಿಚಾರಣೆವರೆಗೂ ತಡೆ ನೀಡಿದೆ.
ಇ.ಡಿ ಆದೇಶ ಪ್ರಶ್ನಿಸಿ ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್ (34) ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.
‘ಇ.ಡಿ ಹೊರಡಿಸಿರುವ ಜಪ್ತಿ ಆದೇಶವು ಮೇಲ್ನೋಟಕ್ಕೆ ಅನುಸೂಚಿತ ಅಪರಾಧ ವರದಿಯಾಗುವುದಕ್ಕೂ ಮುನ್ನ ಸಂಪಾದಿಸಿರುವ ಆಸ್ತಿಗಳನ್ನು ಒಳಗೊಂಡಿದೆ. ಹೀಗಾಗಿ, ಈ ಆದೇಶ ತನ್ನ ವ್ಯಾಪ್ತಿ ಮೀರಿದ ಆದೇಶವಾಗಿದೆ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ, ಜಪ್ತಿ ಆದೇಶಕ್ಕೆ ಮುಂದಿನ ವಿಚಾರಣೆವರೆಗೂ ತಡೆ ನೀಡಿದೆ.
ರನ್ಯಾ ರಾವ್ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್ ಜೆ.ಚೌಟ ವಾದ ಮಂಡಿಸಿದ್ದರು. ಹೈಕೋರ್ಟ್ ವಕೀಲ ವೈ.ಎಲ್. ಮಹೇಶ್ ವಕಾಲತ್ತು ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.