ADVERTISEMENT

ಬೆಂಗಳೂರು: ಚಿಕ್ಕಪ್ಪನ ಲಾಕರ್‌ನಿಂದ ಚಿನ್ನ ಕಳವು; ಆರೋಪಿಯ ಬಂಧನ

​ಪ್ರಜಾವಾಣಿ ವಾರ್ತೆ
Published 6 ಮೇ 2025, 14:33 IST
Last Updated 6 ಮೇ 2025, 14:33 IST
ವಶಪಡಿಸಿಕೊಂಡಿರುವ ಚಿನ್ನಾಭರಣ. 
ವಶಪಡಿಸಿಕೊಂಡಿರುವ ಚಿನ್ನಾಭರಣ.    

ಬೆಂಗಳೂರು: ತಾಯಿಯ ಸಹೋದರಿಯ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿ, 258 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ವೈದ್ಯ ದಂಪತಿಯ ಹೊಸಕೆರೆಹಳ್ಳಿಯ ಮನೆಯಲ್ಲಿ ಕೃತ್ಯ ಎಸಗಿದ್ದ ಆರೋಪಿ ಪ್ರಥಮ್ ಎಂಬಾತನನ್ನು ಬಂಧಿಸಿದ್ದು, 24.51 ಲಕ್ಷ ಮೌಲ್ಯದ ಆಭರಣ ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಪ್ರಥಮ್, ದೂರುದಾರರ ಪತ್ನಿಯ ಸಹೋದರಿಯ ಮಗ. ದಂಪತಿಯೇ ಪ್ರಥಮ್‌ನನ್ನು ಸಾಕಿ, ಉನ್ನತ ಶಿಕ್ಷಣ ಕೊಡಿಸಿದ್ದರು. ಚೆನ್ನೈನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಚಿಕ್ಕಪ್ಪ ಮುಂಬೈಗೆ ತೆರಳಿದ್ದಾಗ ಮನೆಯಲ್ಲಿದ್ದ ಲಾಕರ್‌ನಿಂದ ಚಿನ್ನಾಭರಣಗಳನ್ನು ಕಳವು ಮಾಡಿದ್ದ. ಮುಂಬೈನಿಂದ ಮನೆಗೆ ಮರಳಿದ ಬಳಿಕ, ಲಾಕರ್ ಗಮನಿಸಿದಾಗ ಚಿನ್ನಾಭರಣಗಳು ಕಳ್ಳತನವಾಗಿರುವುದು ಗೊತ್ತಾಗಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಗಿರಿನಗರ ಪೊಲೀಸರು, ಮನೆಗೆಲಸದವರನ್ನು ವಿಚಾರಿಸಿದರು. ನಂತರ ಪ್ರಥಮ್, ಮನೆಗೆ ಬಂದು ಹೋಗಿರುವ ವಿಷಯ ಗೊತ್ತಾಯಿತು. ಚೆನ್ನೈನಲ್ಲಿದ್ದ ಪ್ರಥಮ್‌ನ ಬ್ಯಾಂಕ್ ವಹಿವಾಟಿನ ಮಾಹಿತಿ ಕಲೆಹಾಕಿದಾಗ ಹಣ ವರ್ಗಾವಣೆ ಆಗಿರುವುದು ಗೊತ್ತಾಯಿತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಆರೋಪಿ ಆಭರಣದ ಅಂಗಡಿಗಳಿಗೆ ಮಾರಾಟ ಮಾಡಿದ್ದ 258 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.