ADVERTISEMENT

ಗೋಶಾಲೆ ಆರಂಭ ಪಂಚವಾರ್ಷಿಕ ಯೋಜನೆಯೇ: ಹೈಕೋರ್ಟ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 19:50 IST
Last Updated 7 ಜೂನ್ 2022, 19:50 IST
ಹೈಕೋರ್ಟ್‌
ಹೈಕೋರ್ಟ್‌    

ಬೆಂಗಳೂರು: ‘ಗೋಶಾಲೆ ಆರಂಭಿಸುವುದು ನಿಮ್ಮ ಪಾಲಿಗೆ ಪಂಚವಾರ್ಷಿಕ ಯೋಜನೆಯೇ’ ಎಂದು ಖಾರವಾಗಿ ಪ್ರಶ್ನಿಸಿರುವ ಹೈಕೋರ್ಟ್, ‘ಎಂದಿನಿಂದ ಗೋಶಾಲೆ ಕಾರ್ಯಾರಂಭ ಮಾಡಲಿದ್ದೀರಿ ಎಂಬುದನ್ನು ತಿಳಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಖಡಕ್‌ ನಿರ್ದೇಶನ ನೀಡಿದೆ.

ಈ ಸಂಬಂಧ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ,ಸರ್ಕಾರದ ಪರ ವಕೀಲರು, ‘ಬೆಂಗಳೂರು ಮಹಾನಗರದಲ್ಲಿ ಜಮೀನು ವರ್ಗಾವಣೆ ವಿಚಾರದಲ್ಲಿ ಕೆಲವು ಸಮಸ್ಯೆಗಳಿವೆ. ಇದರಿಂದ ಬೆಂಗಳೂರು ಹೊರತುಪಡಿಸಿದಂತೆ ಉಳಿದ 29 ಜಿಲ್ಲೆಗಳಲ್ಲಿ ಗೋಶಾಲೆ ಆರಂಭಿಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ಜಿಲ್ಲಾ ಮಟ್ಟದ ಸಮಿತಿಗಳನ್ನೂ ರಚಿಸಲಾಗಿದೆ’ ಎಂದರು.

ADVERTISEMENT

‘ಕೆಲವು ಕಡೆನೀರಿನ ಸೌಲಭ್ಯ ಕಲ್ಪಿಸಲು ಕೊಳವೆ ಬಾವಿ ಕೊರೆಸಲಾಗಿದ್ದು, ಶೆಡ್‌ಗಳನ್ನೂ ನಿರ್ಮಾಣ ಮಾಡಲಾಗುತ್ತಿದೆ. ಜುಲೈ 15ರ ವೇಳೆಗೆ 5 ಮತ್ತು ಆಗಸ್ಟ್ 1ರ ಹೊತ್ತಿಗೆ 10 ಗೋಶಾಲೆ ಆರಂಭಗೊಳ್ಳಲಿವೆ’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ತಾಲ್ಲೂಕು ಮತ್ತು ಪ್ರತಿ ಗ್ರಾಮ ಮಟ್ಟದಲ್ಲಿ ಒಂದು ಗೋಶಾಲೆ ಇರಬೇಕು. ಪ್ರತಿ ಜಿಲ್ಲೆಯಲ್ಲಿ ಒಂದು ಗೋಶಾಲೆ ಆರಂಭಿಸುತ್ತೀರಾ, ಹಾಗಾದರೆ ಎಷ್ಟು ಬಿಡಾಡಿ ದನಗಳು ಅಲ್ಲಿ ಆಶ್ರಯಪಡೆಯಲಿವೆ’ ಎಂದು ಪ್ರಶ್ನಿಸಿತು.

ಇದಕ್ಕೆ ಸರ್ಕಾರಿ ವಕೀಲರು, ‘ಖಾಸಗಿಯವರು 197 ಗೋಶಾಲೆಗಳನ್ನು ಆರಂಭಿಸಿದ್ದಾರೆ. ಅವುಗಳಿಗೂ ಸರ್ಕಾರ ಹಣಕಾಸಿನ ನೆರವು ನೀಡುತ್ತಿದೆ. ಗೋಶಾಲೆ ಆರಂಭಿಸುವುದಕ್ಕೆ ಸಂಬಂಧಿಸಿದ ವಸ್ತುಸ್ಥಿತಿ ವರದಿ ಸಿದ್ಧವಾಗಿದೆ. ಅದನ್ನು ಎರಡು ದಿನಗಳಲ್ಲಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು. ಇದನ್ನುಮಾನ್ಯ ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.

ಲೋಕಾಯುಕ್ತ ಹುದ್ದೆ: ವಿಚಾರಣೆ ಮುಂದಕ್ಕೆ
ಬೆಂಗಳೂರು:
‘ಕರ್ನಾಟಕ ಲೋಕಾಯುಕ್ತ ಹುದ್ದೆ ಭರ್ತಿ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಈ ಕುರಿತಂತೆ ವಕೀಲ ಎಸ್.ಉಮಾಪತಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು, ‘ಲೋಕಾಯುಕ್ತರ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳುಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಜೊತೆಗೆ ಸಮಾಲೋಚನೆ ನಡೆಸಬೇಕಾದ ಪ್ರಕ್ರಿಯೆ ಚಾಲನೆಯಲ್ಲಿದೆ. ಒಂದು ವಾರದಲ್ಲಿ ಈ ಬಗ್ಗೆ ನಿಮಗೆ ಮಾಹಿತಿ ತಿಳಿಯಲಿದೆ’ ಎಂದರು. ವಿಚಾರಣೆಯನ್ನುಹತ್ತು ದಿನಗಳ ಕಾಲ ಮುಂದೂಡಲಾಗಿದೆ.

‘ಕಳೆದ ನಾಲ್ಕು ತಿಂಗಳಿಂದ ಲೋಕಾಯುಕ್ತರ ಹುದ್ದೆ ಖಾಲಿಯಿದ್ದು, ಕೂಡಲೇ ಲೋಕಾಯುಕ್ತರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು‘ ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.