ಮಾವಳ್ಳಿ ಶಂಕರ್
ಬೆಂಗಳೂರು: ‘ಶೋಷಿತ ಸಮುದಾಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿಷ್ಪಕ್ಷಪಾತ ತನಿಖೆ ನಡೆಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
ಪಿಯುಸಿಎಎಲ್, ಎಐಎಲ್‌ಎಜೆ ಮತ್ತು ಎಪಿಸಿಆರ್ ಸಹಯೋಗದಲ್ಲಿ ಸಿದ್ದಪಡಿಸಿದ್ದ ಮೊಹಮ್ಮದ್ ಅಶ್ರಫ್ ಅವರ ಗುಂಪು ಹತ್ಯೆಯ ಕುರಿತು ಸತ್ಯಶೋಧನಾ ವರದಿಯನ್ನು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ, ಅವರು ಮಾತನಾಡಿದರು.
‘ಅಶ್ರಫ್ ಮತ್ತು ಕತ್ತರಘಟ್ಟದ ದಲಿತರ ಯುವಕನ ಹತ್ಯೆ ಪ್ರಕರಣಗಳಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡದಿರುವುದು ಸರಿಯಲ್ಲ. ಸರ್ಕಾರದ ನಡೆಯಿಂದಾಗಿ, ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ ಕಡಿಮೆ ಆಗಿದೆ. ದಕ್ಷಿಣ ಕನ್ನಡದಲ್ಲಿ ದಶಕಗಳಿಂದ ಸೌಹಾರ್ದ ಮತ್ತು ಮಾನವೀಯತೆಗೆ ಧಕ್ಕೆ ಆಗುತ್ತಿದೆ. ಅಶ್ರಫ್ ಅವರ ಸಹೋದರ ಜಬ್ಬಾರ್ ಹೇಳಿದಂತೆ ಇದು ಕೊನೆಯ ಗುಂಪು ಹತ್ಯೆಯಾಗಬೇಕು ಎಂದು ಹೇಳಿದರು.
ವಿಶ್ವಸಂಸ್ಥೆಯ ವರ್ಣಭೇದ ನೀತಿ ಸದಸ್ಯೆ ಮತ್ತು ಮಾನವ ಹಕ್ಕುಗಳು ಹೋರಾಟಗಾರ್ತಿ ಕೆ.ಪಿ. ಅಶ್ವಿನಿ ಮಾತನಾಡಿ, ‘ಎಲ್ಲಾ ರೀತಿಯ ಜನಾಂಗೀಯ ತಾರತಮ್ಯಗಳ ನಿರ್ಮೂಲನೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಭಾರತ ಸಹಿ ಹಾಕಿದೆ. ಆದ್ದರಿಂದ ಇಂತಹ ಹಿಂಸಾಚಾರಕ್ಕೆ ಕಡಿವಾಣ ಹಾಕಬೇಕು’ ಎಂದರು.
ಆಲ್ ಇಂಡಿಯಾ ಅಸೋಸಿಯೇಷನ್ ಫಾರ್ ಜಸ್ಟೀಸ್‌ನ ಅಧ್ಯಕ್ಷೆ ಮೈತ್ರೇಯಿ ಕೃಷ್ಣನ್ ಮಾತನಾಡಿ, ‘ಮೊಹಮ್ಮದ್ ಅಶ್ರಫ್ ಅವರ ಗುಂಪು ಹತ್ಯೆಯನ್ನು 2018ರಲ್ಲಿ ತಹಸೀನ್ ಪೂನಾವಾಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ಹಿನ್ನೆಲೆಯಲ್ಲಿ ವಿವರಿಸಿದರು. ಇದು ಕೇವಲ ಕೊಲೆಯಲ್ಲ, ಬದಲಿಗೆ ದ್ವೇಷ ಅಪರಾಧವಾಗಿದೆ. ಇಂತಹ ದ್ವೇಷದ ಅಪರಾಧಗಳು ಸಂವಿಧಾನದ ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದು ದೂರಿದರು.
ವಕೀಲ ವಿನಯ್ ಶ್ರೀನಿವಾಸ್, ಮೊಹಮ್ಮದ್ ಹಯ್ಯಾನ್ ಜಬ್ಬಾರ್ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.